ನಮ್ಮ ಮೇಲೆ ನಿರಂತರ ಒತ್ತಡ ತಂತ್ರ | ಆಪ್ ಆರೋಪಗಳಿಗೆ ಚುನಾವಣಾ ಆಯೋಗ ಪ್ರತಿಕ್ರಿಯೆ

ಚುನಾವಣಾ ಆಯೋಗ | PTI
ಹೊಸದಿಲ್ಲಿ: ಚುನಾವಣಾ ಆಯೋಗವನ್ನು ಮುಖ್ಯ ಚುನಾವಣಾ ಕಮಿಶನರ್ ರಾಜೀವ್ ಕುಮಾರ್ ನಡೆಸುತ್ತಿದ್ದಾರೆ ಎಂಬ ಆಮ್ ಆದ್ಮಿ ಪಕ್ಷ (ಆಪ್)ದ ಆರೋಪಕ್ಕೆ ಮಂಗಳವಾರ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು, ತಾನು ಮೂವರು ಸದಸ್ಯರನ್ನು ಒಳಗೊಂಡಿರುವ ಸಂಸ್ಥೆ ಎಂದು ಹೇಳಿದೆ. ದಿಲ್ಲಿ ಚುನಾವಣೆಗೆ ಸಂಬಂಧಿಸಿ ‘‘ಆಯೋಗದ ಹೆಸರು ಕೆಡಿಸುವ ಉದ್ದೇಶದ ನಿರಂತರ ಒತ್ತಡ ತಂತ್ರಗಳನ್ನು’’ ಆಯೋಗವು ಸಾಮೂಹಿಕವಾಗಿ ಗಮನಿಸಿದೆ ಎಂಬುದಾಗಿಯೂ ಅದು ತಿಳಿಸಿದೆ.
ಚುನಾವಣಾ ಆಯೋಗವು ಏಕ ಸದಸ್ಯ ಸಂಸ್ಥೆ ಎಂಬ ಕಲ್ಪನೆಯನ್ನು ಸೃಷ್ಟಿಸಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಅದು ಹೇಳಿದೆ.
ಇಂಥ ನಿಂದನೆಗಳನ್ನು ನಿರ್ಲಿಪ್ತವಾಗಿ ಮತ್ತು ರಾಗದ್ಷೇಷವಿಲ್ಲದೆ ಸಾಂವಿಧಾನಿಕ ಸಂಯಮದಿಂದ ಸ್ವೀಕರಿಸಲು ಮತ್ತು ಅವುಗಳಿಂದ ವಿಚಲಿತಗೊಳ್ಳದಿರಲು ತಾನು ನಿರ್ಧರಿಸಿರುವುದಾಗಿ ಆಯೋಗ ತಿಳಿಸಿದೆ.
ಚುನಾವಣಾ ಆಯೋಗವು ಬಿಜೆಪಿ ನಾಯಕರ ಮಾದರಿ ನೀತಿ ಸಂಹಿತೆ ಉಲ್ಲಂಘನೆಯನ್ನು ನಿರ್ಲಕ್ಷಿಸುತ್ತಿದೆ ಎಂಬುದಾಗಿ ಆಮ್ ಆದ್ಮಿ ಪಕ್ಷ (ಆಪ್)ದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಸೇರಿದಂತೆ ಪಕ್ಷದ ನಾಯಕರು ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ.
ನಿವೃತ್ತಿಯ ಬಳಿಕ ಸರಕಾರಿ ಹುದ್ದೆಯನ್ನು ಪಡೆಯುವ ದೃಷ್ಟಿಯಿಂದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಬಿಜೆಪಿ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದಾಗಿ ಕೇಜ್ರಿವಾಲ್ ಆರೋಪಿಸಿದ್ದರು. ರಾಜೀವ್ ಕುಮಾರ್ ಫೆಬ್ರವರಿ 18ರಂದು ನಿವೃತ್ತಿಯಾಗಲಿದ್ದಾರೆ.
ದಿಲ್ಲಿ ವಿಧಾನಸಭಾ ಚುನಾವಣೆ ಬುಧವಾರ ನಡೆಯಲಿದೆ. ಮತ ಎಣಿಕೆ ಶನಿವಾರ ನಡೆಯಲಿದೆ.