ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಕುರಿತಾದ ಆರೋಪಗಳ ಕುರಿತು ಚರ್ಚಿಸಲು ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ಆಹ್ವಾನ

ಹೊಸದಿಲ್ಲಿ: 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಅಕ್ರಮಗಳು ನಡೆದಿದ್ದವು ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆರೋಪಗಳ ಕುರಿತು ಚುನಾವಣಾ ಆಯೋಗವು ಅವರಿಗೆ ವಿಧ್ಯುಕ್ತ ಪತ್ರವನ್ನು ಬರೆದಿದ್ದು, ಎಲ್ಲ ಚುನಾವಣೆಗಳನ್ನು ಸಂಸತ್ತು ಅಂಗೀಕರಿಸಿದ ಕಾನೂನುಗಳು ಮತ್ತು ನಿಯಮಗಳ ಪ್ರಕಾರವೇ ಕಟ್ಟುನಿಟ್ಟಾಗಿ ನಡೆಸಲಾಗಿದೆ ಎಂದು ತಿಳಿಸಿದೆ.
ಇಡೀ ಚುನಾವಣಾ ಪ್ರಕ್ರಿಯೆಯು ರಾಜಕೀಯ ಪಕ್ಷಗಳು ನೇಮಕಗೊಳಿಸುವ ಬೂತ್ ಮಟ್ಟದ ಏಜೆಂಟ್ಗಳು ಸೇರಿದಂತೆ ಸಾವಿರಾರು ಸಿಬ್ಬಂದಿಗಳನ್ನು ಒಳಗೊಂಡಿರುತ್ತದೆ ಎಂದು ಅದು ಒತ್ತಿ ಹೇಳಿದೆ.
ಪ್ರಮುಖ ದೈನಿಕವೊಂದರಲ್ಲಿ ರಾಹುಲ್ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಜೂ.12ರಂದು ಅವರಿಗೆ ಇಮೇಲ್ ಮೂಲಕ ರವಾನಿಸಿರುವ ಪತ್ರದಲ್ಲಿ ಆಯೋಗವು,ಇಡೀ ಚುನಾವಣಾ ಪ್ರಕ್ರಿಯೆಯನ್ನು ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ವಿಕೇಂದ್ರೀಕೃತ ರೀತಿಯಲ್ಲಿ ನಡೆಸಲಾಗುತ್ತದೆ. ಇದು ಆಯೋಗದಿಂದ ನೇಮಕಗೊಂಡ 1,00,186ಕ್ಕೂ ಅಧಿಕ ಬೂತ್ ಮಟ್ಟದ ಅಧಿಕಾರಿಗಳು,288 ಚುನಾವಣಾ ನೋಂದಣಾಧಿಕಾರಿಗಳು,139 ಸಾಮಾನ್ಯ ವೀಕ್ಷಕರು,41 ಪೋಲಿಸ್ ವೀಕ್ಷಕರು,71 ವೆಚ್ಚ ವೀಕ್ಷಕರು ಮತ್ತು 288 ಚುನಾವಣಾಧಿಕಾರಿಗಳನ್ನು ಒಳಗೊಂಡಿರುತ್ತದೆ ಎಂದು ವಿವರಿಸಿದೆ.
ಇದಲ್ಲದೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ರಾಜಕೀಯ ಪಕ್ಷಗಳು 1,08,026 ಬೂತ್ ಮಟ್ಟದ ಏಜೆಂಟ್ಗಳನ್ನು ನೇಮಿಸಿದ್ದು,ಈ ಪೈಕಿ 28,421 ಏಜೆಂಟ್ಗಳು ಕಾಂಗ್ರೆಸ್ ಪಕ್ಷದವರಾಗಿದ್ದರು ಎಂದೂ ಆಯೋಗವು ರಾಹುಲ್ಗೆ ತಿಳಿಸಿದೆ.
ಡಿಜಿಟಲ್ ಮತದಾರರ ಪಟ್ಟಿಗೆ ರಾಹುಲ್ ಆಗ್ರಹ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಅಕ್ರಮಗಳು ನಡೆದಿವೆ ಎಂಬ ತನ್ನ ಆರೋಪವನ್ನು ಮಂಗಳವಾರ ಪುನರುಚ್ಚರಿಸಿರುವ ರಾಹುಲ್ ಗಾಂಧಿಯವರು,ಚುನಾವಣೆಗಳಲ್ಲಿ ‘ಮತಗಳ್ಳತನ ’ ನಡೆದಿತ್ತು ಎಂದಿದ್ದಾರೆ. ಡಿಜಿಟಲ್ ಮತದಾರರ ಪಟ್ಟಿಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳ ತಕ್ಷಣ ಬಿಡುಗಡೆಗೆ ಅವರು ಆಗ್ರಹಿಸಿದ್ದಾರೆ.
2024ರ ಲೋಕಸಭಾ ಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳ ನಡುವಿನ ಕೇವಲ ಆರು ತಿಂಗಳುಗಳಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕ್ಷೇತ್ರವಾದ ನಾಗಪುರ ದಕ್ಷಿಣದಲ್ಲಿ 29,219 ಮತದಾರರನ್ನು ಹೊಸದಾಗಿ ಸೇರಿಸಲಾಗಿತ್ತು ಎಂದು ಪ್ರತಿಪಾದಿಸಿರುವ ಮಾಧ್ಯಮ ವರದಿಯನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ರಾಹುಲ್,ಕೇವಲ ಆರು ತಿಂಗಳುಗಳಲ್ಲಿ ಫಡ್ನವೀಸ್ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಶೇ.8ರಷ್ಟು ಬೆಳೆದಿತ್ತು. ಅಪರಿಚಿತ ವ್ಯಕ್ತಿಗಳಿಂದ ಮತದಾನವನ್ನು ಬೂತ್ ಮಟ್ಟದ ಅಧಿಕಾರಿಗಳು ವರದಿ ಮಾಡಿದ್ದರು ಎಂದು ಹೇಳಿದ್ದಾರೆ.
ರಾಹುಲ್ ಆರೋಪವನ್ನು ತಿರಸ್ಕರಿಸಿರುವ ಫಡ್ನವೀಸ್,‘ಕುರುಡಾಗಿ ಬಾಣಗಳನ್ನು ಬಿಡುವ ’ ಮುನ್ನ ತನ್ನ ಪಕ್ಷದ ಚುನಾಯಿತ ಶಾಸಕರೊಂದಿಗೆ ಮಾತನಾಡುವಂತೆ ಅವರಿಗೆ ಸೂಚಿಸಿದ್ದಾರೆ.