ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪರಿಷ್ಕರಣೆ; ಜು. 9ರಂದು ‘ಬಿಹಾರ್ ಬಂದ್’ಗೆ ಕರೆ ನೀಡಿದ ‘ಇಂಡಿಯಾ’ ಮೈತ್ರಿಕೂಟ

ಚುನಾವಣಾ ಆಯೋಗ | PTI
ಪಾಟ್ನಾ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರತಿಭಟಿಸಿ ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟ ಜುಲೈ 9ರಂದು ‘ಬಿಹಾರ್ ಬಂದ್’ಗೆ ಕರೆ ನೀಡಿದೆ.
ಲೋಕಸಭೆಯ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ‘ಬಿಹಾರ್ ಬಂದ್’ನಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿಧಾನ ಸಭೆಯ ಚುನಾವಣೆಗೆ ಮುನ್ನ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಶೀಲನೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಪ್ರತಿಪಕ್ಷ ಜುಲೈ 7ರಂದು ‘ಬಿಹಾರ್ ಬಂದ್’ಗೆ ಕರೆ ನೀಡಿದೆ ಎಂದು ಆರ್ಜೆಡಿ ನಾಯಕ ಹಾಗೂ ಬಿಹಾರ ವಿಧಾನ ಸಭೆ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಸಮನ್ವಯ ಸಮಿತಿಯ ಅಧ್ಯಕ್ಷ ತೇಜಸ್ವಿ ಪ್ರಸಾದ್ ಯಾದವ್ ಅವರು ತಿಳಿಸಿದ್ದಾರೆ.
‘‘ನಾವು ಜುಲೈ 9ರಂದು ಚಕ್ಕಾ ಜಾಮ್ ನಡೆಸಲಿದ್ದೇವೆ. ಚುನಾವಣಾ ಆಯೋಗ ಹಾಗೂ ಸರಕಾರ ವಿರೋಧ ಪಕ್ಷದ ಗುರಿಯಾಗಿರುತ್ತದೆ. ಚುನಾವಣಾ ಆಯೋಗ ಪ್ರತಿ ಗಂಟೆಗೆ ತನ್ನ ಆದೇಶವನ್ನು ಬದಲಾಯಿಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಇದರ ಪರಿಣಾಮ ಪರಿಶೀಲನೆ ಕಾರ್ಯದಲ್ಲಿ ತೊಡಗಿರುವ ಬಿಎಲ್ಒ ಹಾಗೂ ಇತರ ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.





