ಉಪ ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಆರಂಭ: ಚುನಾವಣಾ ಆಯೋಗ

ಚುನಾವಣಾ ಆಯೋಗ | PTI
ಹೊಸದಿಲ್ಲಿ, ಜು. 23: ಉಪ ರಾಷ್ಟ್ರಪತಿ ಚುನಾವಣೆಯ ಪ್ರಕ್ರಿಯೆಯನ್ನು ಆರಂಭಿಸಿರುವುದಾಗಿ ಚುನಾವಣಾ ಆಯೋಗ ಬುಧವಾರ ತಿಳಿಸಿದೆ. ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆ ನೀಡಿದ ಎರಡು ದಿನಗಳ ಬಳಿಕ ಅದು ಈ ಪ್ರಕಟನೆ ನೀಡಿದೆ.
ಸಂಸತ್ ನ ಉಭಯ ಸದನಗಳ ಸದಸ್ಯರನ್ನು ಒಳಗೊಂಡ ಚುನಾವಣಾ ಕ್ಷೇತ್ರವನ್ನು ರಚಿಸುವ ಪ್ರಕ್ರಿಯೆಯನ್ನು ಆರಂಭಿಸಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲು ಚುನಾಯಿತ ಮತ್ತು ನಾಮನಿರ್ದೇಶಿತ ಸದಸ್ಯರಿಬ್ಬರೂ ಅರ್ಹತೆ ಹೊಂದಿದ್ದಾರೆ.
ಮತದಾನ ಅಧಿಕಾರಿ ಮತ್ತು ಸಹಾಯಕ ಮತದಾನ ಅಧಿಕಾರಿಗಳ ಆಯ್ಕೆಯನ್ನೂ ಅಂತಿಮಗೊಳಿಸಲಾಗುತ್ತಿದೆ ಎಂದು ಅದು ತಿಳಿಸಿದೆ.
‘‘ಸಿದ್ಧತಾ ಕೆಲಸಗಳು ಪೂರ್ಣಗೊಂಡ ಬಳಿಕ, ಉಪರಾಷ್ಟ್ರಪತಿ ಚುನಾವಣಾ ವೇಳಾಪಟ್ಟಿಯನ್ನು ಸಾಧ್ಯವಾದಷ್ಟು ಬೇಗ ಪ್ರಕಟಿಸಲಾಗುವುದು’’ ಎಂದು ಚುನಾವಣಾ ಆಯೋಗ ತಿಳಿಸಿದೆ.
ತನ್ನ ಆರೋಗ್ಯ ಸರಿಯಿಲ್ಲ ಎಂಬ ಕಾರಣ ನೀಡಿ ಧನ್ಕರ್ ಸೋಮವಾರ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ಅವಧಿಯು 2027 ಆಗಸ್ಟ್ 10ಕ್ಕೆ ಕೊನೆಗೊಳ್ಳಬೇಕಾಗಿತ್ತು.





