ಚುನಾವಣಾ ಆಯೋಗ ಪಕ್ಷಪಾತಿ ಅಂಪೈರ್: ರಾಹುಲ್ ಕಿಡಿ

ರಾಹುಲ್ಗಾಂಧಿ | PC : PTI
ಆನಂದ, ಜು.26: ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರುಗಳ ಅಭಿಪ್ರಾಯವನ್ನು ಪರಿಗಣಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಶನಿವಾರ ಭರವಸೆ ನೀಡಿದ್ದಾರೆ. ಗುಜರಾತ್ ನ ಆನಂದ್ ನಲ್ಲಿ ಸಂಘಟನ್ ಸುಜಾನ್ ಅಭಿಯಾನ್ (ಪಕ್ಷದ ಸಂಘಟನೆ ಬಲಪಡಿಸುವ ಅಭಿಯಾನ) ಉದ್ಘಾಟಿಸಿ ಮಾತನಾಡಿದ ಅವರು ಚುನಾವಣಾ ಆಯೋಗವು ಪಕ್ಷಪಾತದಿಂದ ವರ್ತಿಸುತ್ತಿದೆ ಎಂದು ಆಪಾದಿಸಿದರು. ಬಿಜೆಪಿಯ ಪ್ರಧಾನ ನೆಲೆಯಾದ ಗುಜರಾತ್ ನಲ್ಲಿ ಅದನ್ನು ಪರಾಭವಗೊಳಿಸುವುದು ಅತ್ಯಂತ ಮುಖ್ಯವಾಗಿದೆ ಎಂದವರು ಹೇಳಿದ್ದಾರೆ.
ಅಭಿಯಾನದ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಗುಜರಾತ್ ನ ಇನ್ನೋರ್ವ ಕಾಂಗ್ರೆಸ್ ನಾಯಕ, ಚುನಾವಣಾ ಆಯೋಗದ ವಿರುದ್ಧ ಕ್ರಿಕೆಟ್ ಪರಿಭಾಷೆಯಲ್ಲೇ ಟೀಕಾಪ್ರಹಾರ ನಡೆಸಿದರು. ‘‘ಚುನಾವಣಾಆಯೋಗವು ಪಕ್ಷಾಪಾತದಿಂದ ಕೂಡಿದ್ದು, ಇದರ ಪರಿಣಾಮವಾಗಿ ಕಾಂಗ್ರೆಸ್ ಪಕ್ಷವು ಹಲವಾರು ಚುನಾವಣೆಗಳನ್ನು ಸೋಲುತ್ತಾ ಬಂದಿದೆ’’ ಎಂದು ಆಪಾದಿಸಿದರು.
2027ರ ರಾಜ್ಯ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಆನಂದ ನಗರದ ಸಮೀಪ ಶನಿವಾರ ನೂತನ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳಿಗಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. 2027ರ ಗುಜರಾತ್ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ಆಯೋಜಿಸಿರುವ ಈ ಶಿಬಿರವು ಜುಲೈ 28ರಂದು ಸಮಾರೋಪಗೊಳ್ಳಲಿದೆ. ಸಭೆಯಲ್ಲಿ ಜಿಲ್ಲಾಧ್ಯಕ್ಷರುಗಳಿಗೆ ಮಾರ್ಗದರ್ಶನ ನೀಡಿದ ರಾಹುಲ್ ಗಾಂಧಿ ಅವರು, ಪಕ್ಷದ ನಾಯಕತ್ವವು ಕಾರ್ಯಕರ್ತರ ಸಂಪೂರ್ಣ ಬೆಂಬಲಕ್ಕಿರುವುದಾಗಿ ಭರವಸೆ ನೀಡಿದ್ದಾರೆಂದು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ಡಾ ಅವರು ಸುದ್ದಿಗಾರರಿಗೆ ತಿಳಿಸಿದರು.
ಜನರನ್ನು ಬಾಧಿಸುವ ವಿಷಯಗಳನ್ನು ಕೈಗೆತ್ತಿಕೊಳ್ಳುವಂತೆ ರಾಹುಲ್ಗಾಂಧಿ ನಮ್ಮನ್ನು ಕೇಳಿಕೊಂಡಿದ್ದಾರೆ. ವಿವಿಧ ಚುನಾವಣೆಗಳಿಗೆ ಅಭ್ಯರ್ಥಿಳನ್ನು ಆಯ್ಕೆ ಮಾಡುವ ಮುನ್ನ ನಗರ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರ ಜೊತೆ ಸಮಾಲೋಚಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆಂದು ರಾಜಕೋಟ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜದೀಪ್ ಸಿನ್ಹಾ ಜಡೇಜಾ ಅವರು ತಿಳಿಸಿದ್ದಾರೆ.
‘‘ಉತ್ತರಪ್ರದೇಶ, ಬಿಹಾರ ಮತ್ತಿತರ ರಾಜ್ಯಗಳಲ್ಲಿ ಬಿಜೆಪಿಯನ್ನು ಪರಾಭವಗೊಳಿಸಲು ನಾವು ಕಠಿಣವಾಗಿ ಶ್ರಮಿಸಬೇಕಾಗಿದೆ. ಒಂದು ವೇಳೆ ನಮಗೆ ಬಿಜೆಪಿಯನ್ನು ಗುಜರಾತ್ ನಲ್ಲಿ ಸೋಲಿಸಲು ಸಾಧ್ಯವಾದಲ್ಲಿ, ಎಲ್ಲೆಡೆಯೂ ಆ ಪಕ್ಷವನ್ನು ಸೋಲಿಸಬಹುದಾಗಿದೆ’’ ಎಂದು ರಾಹುಲ್ ಹೇಳಿದ್ದಾಗಿ ಸೋಲಂಕಿ ತಿಳಿಸಿದರು.
ಲೋಕಸಭೆಯ ಪ್ರತಿಪಕ್ಷ ನಾಯಕರಾದ ರಾಹುಲ್ಗಾಂಧಿ ಅವರು, ಲೋಕಸಭೆಯನ್ನು ಎಲ್ಲರೂ ಬಂದು ಪ್ರಾರ್ಥಿಸಬಹುದಂತಹ ದೇವಾಲಯಕ್ಕೆ ಹೋಲಿಸಿದ್ದಾರೆ. ಆದರೆ ಆರೆಸ್ಸೆಸ್-ಬಿಜೆಪಿ ಯಾರು ಪ್ರಸಾದ ಪಡೆಯಬೇಕೆಂಬುದನ್ನು ನಿಯಂತ್ರಿಸುತ್ತಿದೆ ಎಂದವರು ಹೇಳಿದ್ದಾರೆ.







