ಸೆಪ್ಟೆಂಬರ್ 30ರ ವೇಳೆಗೆ SIR ಅನುಷ್ಠಾನಕ್ಕೆ ಸಿದ್ಧರಾಗಿರಿ: ರಾಜ್ಯ ಚುನಾವಣಾಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚನೆ

ಚುನಾವಣಾ ಆಯೋಗ |PTI
ಹೊಸದಿಲ್ಲಿ,ಸೆ.21: ದೇಶಾದ್ಯಂತ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯನ್ನು ಕೈಗೊಳ್ಳಲು ಸೆಪ್ಟೆಂಬರ್ 30ರೊಳಗೆ ಸಜ್ಜಾಗುವಂತೆ ಭಾರತೀಯ ಚುನಾವಣಾ ಆಯೋಗ(ಇಸಿಐ)ವು, ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿ (ಸಿಇಓ)ಗಳಿಗೆ ನಿರ್ದೇಶನಗಳನ್ನು ನೀಡಿದೆ. ಆಕ್ಟೋಬರ್ನಲ್ಲಿ ಮತದಾರ ಪಟ್ಟಿಯ ಪರಿಷ್ಕರಣೆಯನ್ನು ಆರಂಭಿಸುವಂತೆಯೂ ಅದು ಸೂಚನೆಯನ್ನು ನೀಡಿದೆ.
ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಸಮಾವೇಶವೊಂದರಲ್ಲಿ, ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು, 10 ರಿಂದ 15 ದಿನಗಳೊಳಗೆ ಮತದಾರಪಟ್ಟಿಯ ತೀವ್ರ ಪರಿಷ್ಕರಣೆಯನ್ನು ಆರಂಭಿಸುವಂತೆ ಕೇಂದ್ರ ಚುನಾವಣಾ ಆಯೋಗವು ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳನ್ನು ಕೇಳಿಕೊಂಡಿತ್ತು. ಈ ಪ್ರಕ್ರಿಯೆಯನ್ನು ಏಕರೂಪಗೊಳಿಸುವುದಕ್ಕಾಗಿ ಸೆಪ್ಟೆಂಬರ್ 30ರ ಅಂತಿಮ ಗಡುವನ್ನು ನಿಗದಿಪಡಿಸಿತ್ತು.
ಕಳೆದ ಎಸ್ಐಆರ್ ನಂತರ ಪ್ರಕಟಿಸಲಾದ ಮತದಾರಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಉದಾಹರಣೆಗೆ , ದಿಲ್ಲಿಯು 2008ರಲ್ಲಿ ಚುನಾವಣಾ ಪಟ್ಟಿಯನ್ನು ಪ್ರಕಟಿಸಿತ್ತು, ಉತ್ತರಾಖಂಡದಲ್ಲಿ 2006ರಲ್ಲಿ ಕೊನೆಯ ಬಾರಿಗೆ ಮತದಾರಪಟ್ಟಿಯ ಪರಿಷ್ರಣೆ ನಡೆದಿತ್ತು. ಬಿಹಾರದಲ್ಲಿ ಎಸ್ಐಆರ್ಗಾಗಿ 2003ರ ಮತದಾರಪಟ್ಟಿಯನ್ನು ಬಳಸಿಕೊಳ್ಳಲಾಗುತ್ತಿದೆ.
ಬಹುತೇಕ ರಾಜ್ಯಗಳಲ್ಲಿ 2002 ಹಾಗೂ 2004ರ ನಡುವೆ ಕೊನೆಯ ಬಾರಿಗೆ ಎಸ್ಐಆರ್ ನಡೆದಿತ್ತು. ಬಿಹಾರದ ಬಳಿಕ ದೇಶಾದ್ಯಂತ ಮತದಾರಪಟ್ಟಿಯ ಪರಿಷ್ಕರಣೆಯನ್ನು ಜಾರಿಗೊಳಿಸುವ ಯೋಜನೆಯನ್ನು ಭಾರತೀಯ ಚುನಾವಣಾ ಆಯೋಗ ಹೊಂದಿದೆ.
ಮತದಾರರ ಜನ್ಮಸ್ಥಳವನ್ನು ದೃಢಪಡಿಸಿಕೊಳ್ಳುವ ಮೂಲಕ ಅಕ್ರಮ ವಿದೇಶಿ ವಲಸಿಗರನ್ನು ಗುರುತಿಸುವುದು ಮತ್ತು ಅವರ ಹೆಸರನ್ನು ಮತದಾರಪಟ್ಟಿಯಿಂದ ತೆಗೆದುಹಾಕುವುದೇ ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಮುಖ್ಯ ಗುರಿಯೆಂದು ಚುನಾವಣಾ ಆಯೋಗ ಹೇಳಿಕೊಂಡಿದೆ. ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ನಂತಹ ದೇಶಗಳಿಂದ ಅನಧಿಕೃತವಾಗಿ ವಲಸೆ ಬಂದಿರುವ ವ್ಯಕ್ತಿಗಳನ್ನು ಬಂಧಿಸುವ ಕಾರ್ಯಾಚರಣೆ ನಡುವೆಯೇ ಚುನಾಣಾ ಆಯೋಗ ಈ ಹೆಜ್ಜೆಯನ್ನಿರಿಸಿದೆ.
ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಹಾಗೂ ಪಶ್ಚಿಮಬಂಗಾಳ ವಿಧಾನವಸಭೆಗಳಿಗೆ ಚುನಾವಣೆ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ನಡೆಸಲಾಗುತ್ತಿದೆ.







