ಜನರಿಗೆ ನಿಷ್ಪಕ್ಷಪಾತ ಚುನಾವಣಾ ಆಯೋಗ ಬೇಕಿದೆ: ಬಿಹಾರ ಫಲಿತಾಂಶ ಕುರಿತು ಸ್ಟಾಲಿನ್

ಎಂ.ಕೆ.ಸ್ಟಾಲಿನ್ | Photo Credit : PTI
ಚೆನ್ನೈ,ನ.15: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಭರ್ಜರಿ ಜಯಕ್ಕಾಗಿ ಶನಿವಾರ ಜೆಡಿಯು ನಾಯಕ ನಿತೀಶ್ ಕುಮಾರ್ ಅವರನ್ನು ಅಭಿನಂದಿಸಿದ್ದಾರೆ. ಇದೇ ವೇಳೆ ಅವರು ಚುನಾವಣಾ ಆಯೋಗವನ್ನು ಕಟುವಾಗಿ ಟೀಕಿಸಿದ್ದಾರೆ.
ಬಿಹಾರ ಚುನಾವಣಾ ಫಲಿತಾಂಶವು ಚುನಾವಣಾ ಆಯೋಗದ ದುಷ್ಕೃತ್ಯಗಳು ಮತ್ತು ಭಂಡಧೈರ್ಯವನ್ನು ಮರೆ ಮಾಡಿಲ್ಲ ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿರುವ ಸ್ಟಾಲಿನ್,ಚುನಾವಣಾ ಆಯೋಗದ ಖ್ಯಾತಿ ಈಗ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಈ ದೇಶದ ನಾಗರಿಕರು ಬಲವಾದ ಮತ್ತು ಹೆಚ್ಚು ನಿಷ್ಪಕ್ಷಪಾತ ಚುನಾವಣಾ ಆಯೋಗಕ್ಕೆ ಅರ್ಹರಾಗಿದ್ದಾರೆ. ಆಯೋಗದ ಚುನಾವಣಾ ಕಾರ್ಯವೈಖರಿಯು ಸೋತವರಲ್ಲಿಯೂ ವಿಶ್ವಾಸವನ್ನು ಪ್ರೇರೇಪಿಸುವಂತಿರಬೇಕು ಎಂದು ಬರೆದಿದ್ದಾರೆ.
ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟ ಸೋತಿದ್ದರೂ ಸ್ಟಾಲಿನ್ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಮೈತ್ರಿಕೂಟದ ದಣಿವರಿಯದ ಪ್ರಚಾರಕ್ಕಾಗಿ ಅವರನ್ನು ಹೊಗಳಿದರು.
ಚುನಾವಣಾ ಫಲಿತಾಂಶಗಳು ಜನರಿಗೆ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ತಲುಪುವಿಕೆ, ಸಾಮಾಜಿಕ ಮತ್ತು ಸೈದ್ಧಾಂತಿಕ ಒಕ್ಕೂಟಗಳು,ಸ್ಪಷ್ಟ ರಾಜಕೀಯ ಸಂದೇಶಗಳು ಮತ್ತು ಮತದಾನದ ಅಂತ್ಯದವರೆಗೂ ಸಮರ್ಪಿತ ನಿರ್ವಹಣೆಯನ್ನು ಪ್ರತಿಬಿಂಬಿಸುತ್ತವೆ. ಇಂಡಿಯಾ ಮೈತ್ರಿಕೂಟದ ನಾಯಕರು ಅನುಭವಿ ರಾಜಕಾರಣಿಗಳಾಗಿದ್ದು ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಸ್ಟಾಲಿನ್ ಹೇಳಿದ್ದಾರೆ.







