ಚುನಾವಣಾ ಆಯೋಗವು ಎಸ್ಐಆರ್ ಮೂಲಕ ಪ್ರಜಾಪ್ರಭುತ್ವ, ಪ್ರತಿಪಕ್ಷಗಳ ನಾಶಕ್ಕೆ ಕುತಂತ್ರ ರೂಪಿಸುತ್ತಿದೆ: ಕಾಂಗ್ರೆಸ್

ಚುನಾವಣಾ ಆಯೋಗ | Photo Credit : PTI
ಹೊಸದಿಲ್ಲಿ,ನ.18: ಚುನಾವಣಾ ಆಯೋಗವು ಎಸ್ಐಆರ್ ಪ್ರಕ್ರಿಯೆಯ ಮೂಲಕ ಪ್ರಜಾಪ್ರಭುತ್ವ ಮತ್ತು ಪ್ರತಿಪಕ್ಷಗಳನ್ನು ನಾಶಗೊಳಿಸಲು ಕುತಂತ್ರ ರೂಪಿಸುತ್ತಿದೆ ಎಂದು ಮಂಗಳವಾರ ಆರೋಪಿಸಿದ ಕಾಂಗ್ರೆಸ್,ಡಿಸೆಂಬರ್ ಮೊದಲ ವಾರದಲ್ಲಿ ಇಲ್ಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸುವ ಮೂಲಕ ಬೀದಿಗಿಳಿದು ಹೋರಾಟ ನಡೆಸುವ ಪಣವನ್ನು ತೊಟ್ಟಿದೆ.
ತನ್ನ ‘ವೋಟ್ ಚೋರಿ’ ಆರೋಪವನ್ನು ಇನ್ನಷ್ಟು ತೀವ್ರಗೊಳಿಸಿದ ಕಾಂಗ್ರೆಸ್,ಎಸ್ಐಆರ್ ನಿರ್ದಿಷ್ಟ ಮತಗಳನ್ನು ಅಳಿಸುವ ಉದ್ದೇಶ ಹೊಂದಿದ್ದರಿಂದ ಆ ಪ್ರಕ್ರಿಯೆ ಸಂದರ್ಭದಲ್ಲಿ ಚುನಾವಣಾ ಆಯೋಗದ ವರ್ತನೆ ತೀವ್ರ ನಿರಾಶಾದಾಯಕವಾಗಿತ್ತು ಎಂದು ಹೇಳಿದೆ. ಚುನಾವಣಾ ಆಯೋಗವು ತಾನು ಬಿಜೆಪಿಯ ನೆರಳಿನಲ್ಲಿ ಕಾರ್ಯಾಚರಿಸುತ್ತಿಲ್ಲ ಎನ್ನುವುದನ್ನು ತಕ್ಷಣವೇ ಸಾಬೀತು ಮಾಡಬೇಕು ಎಂದು ಆಗ್ರಹಿಸಿದೆ.
ಪ್ರಸ್ತುತ ಎಸ್ಐಆರ್ ನಡೆಯುತ್ತಿರುವ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಮುಖ ಪದಾಧಿಕಾರಿಗಳೊಂದಿಗೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರು, ಕಾಂಗ್ರೆಸ್ ಪಕ್ಷವು ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಚುನಾವಣಾ ಆಯೋಗವನ್ನು ಬಯಲಿಗೆಳೆಯಲಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು,ಎಸ್ಐಆರ್ ಪ್ರಕ್ರಿಯೆಯನ್ನು ಅಸ್ತ್ರವನ್ನಾಗಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಮತದಾರರ ಪಟ್ಟಿಗಳ ಋಜುತ್ವವನ್ನು ರಕ್ಷಿಸಲು ಕಾಂಗ್ರೆಸ್ ನಿಸ್ಸಂದಿಗ್ಧವಾಗಿ ಬದ್ಧವಾಗಿದೆ ಎಂದು ಖರ್ಗೆ ಸಭೆಯ ಬಳಿಕ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.







