ಪಶ್ಚಿಮ ಬಂಗಾಳ ಎಸ್ಐಆರ್ | ಎಣಿಕೆ ಫಾರಂಗಳಲ್ಲಿ ಮತದಾರರ ಸ್ಥಿತಿಗತಿ ಗುರುತಿಸಲು ಬಿಎಲ್ಒಗಳ ಹಿಂದೇಟು: ಕಳವಳ ವ್ಯಕ್ತಪಡಿಸಿದ ಚುನಾವಣಾ ಆಯೋಗ

ಭಾರತೀಯ ಚುನಾವಣಾ ಆಯೋಗ | Photo Credit : PTI
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗಾಗಿ ಮನೆಮನೆಗೆ ಭೇಟಿ ವೇಳೆ ಅನೇಕ ಬಿಎಲ್ಒಗಳು ಮತದಾರರು ಗೈರುಹಾಜರಾಗಿರುವ,ಸ್ಥಳಾಂತರಗೊಂಡಿರುವ ಮತ್ತು ನಿಧನರಾಗಿರುವಂತಹ ಪ್ರಕರಣಗಳಲ್ಲಿ ಅದನ್ನು ಎಣಿಕೆ ಫಾರಂಗಳಲ್ಲಿ ಗುರುತಿಸಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದ್ದು,ಈ ಬಗ್ಗೆ ಭಾರತೀಯ ಚುನಾವಣಾ ಆಯೋಗವು (ಇಸಿಐ) ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ.
ಪಶ್ಚಿಮ ಬಂಗಾಳ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಅಗರ್ವಾಲ್ ಮತ್ತು ಹಿರಿಯ ಅಧಿಕಾರಿಗಳು ಶನಿವಾರ ಜಿಲ್ಲಾ ಚುನಾವಣಾಧಿಕಾರಿಗಳಾಗಿ (ಡಿಆರ್ಒಗಳು) ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿಗಳು ಮತ್ತು ಚುನಾವಣಾ ನೋಂದಣಾಧಿಕಾರಿಗಳೊಂದಿಗೆ (ಇಆರ್ಗಳು) ವರ್ಚುವಲ್ ಸಭೆ ನಡೆಸಿ, ಇಂತಹ ಗುರುತಿಸುವಿಕೆ ಇಲ್ಲದ ಎಣಿಕೆ ಫಾರಂಗಳ ಕುರಿತು ವರದಿಗಳನ್ನು ಕೋರಿದರು.
ಬಿಎಲ್ಒಗಳ ಒಂದು ವರ್ಗದ ವಿರುದ್ಧ ಇಸಿಐಗೆ ಹಲವಾರು ದೂರುಗಳು ಬಂದಿವೆ. ಗೈರು ಹಾಜರಾಗಿರುವ, ಸ್ಥಳಾಂತರಗೊಂಡಿರುವ,ಮೃತಪಟ್ಟವರ ಅಥವಾ ನಕಲಿ ಮತದಾರರ ಎಣಿಕೆ ಫಾರಂಗಳನ್ನು ಆ ರೀತಿಯಲ್ಲಿ ಗುರುತಿಸದೆ ಸಂಗ್ರಹಿಸಲಾಗುತ್ತಿದೆ ಮತ್ತು ಬಿಎಲ್ಒ ಆ್ಯಪ್ನಲ್ಲಿ ಡಿಜಿಟಲೀಕರಿಸುತ್ತಿಲ್ಲ ಎನ್ನುವುದನ್ನು ಆಯೋಗವು ಗಮನಿಸಿದೆ. ಕಟ್ಟುನಿಟ್ಟಿನ ಜಾಗ್ರತೆಯನ್ನು ವಹಿಸುವಂತೆ ಮತ್ತು ಅಂತಹ ಬಿಎಲ್ಒಗಳ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಡಿಆರ್ಒಗಳು ಮತ್ತು ಇಆರ್ಒಗಳಿಗೆ ನಿರ್ದೇಶನವನ್ನು ನೀಡಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.







