ಬಿಹಾರ ಮಹಿಳೆಯರಿಗೆ 10,000 ರೂ. | ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಶಾಮೀಲು: ಅಶೋಕ್ ಗೆಹ್ಲೋಟ್ ಆರೋಪ

ಅಶೋಕ್ ಗೆಹ್ಲೋಟ್ |Photo Credit : PTI
ಹೊಸದಿಲ್ಲಿ, ನ. 14: ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರ ನಡೆಯುತ್ತಿದ್ದಾಗಲೂ ರಾಜ್ಯ ಸರಕಾರವು ಮಹಿಳೆಯರಿಗೆ 10,000 ರೂಪಾಯಿ ನೀಡುತ್ತಿತ್ತು, ಆದರೆ ಚುನಾವಣಾ ಆಯೋಗವು ಮೂಕಪ್ರೇಕ್ಷಕನಾಯಿತು ಎಂದು ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಶುಕ್ರವಾರ ಹೇಳಿದ್ದಾರೆ.
ಎನ್ಡಿಎ ಒಕ್ಕೂಟವು ಬೃಹತ್ ವಿಜಯದತ್ತ ಮುನ್ನಡೆಯುತ್ತಿರುವಂತೆಯೇ, ಚುನಾವಣಾ ಆಯೋಗದ ವೈಫಲ್ಯಗಳತ್ತ ಬೆಟ್ಟು ಮಾಡಿರುವ ಕಾಂಗ್ರೆಸ್ ನಾಯಕ, ಅದು ಬಿಹಾರದ ಆಡಳಿತ ಪಕ್ಷದೊಂದಿಗೆ ಶಾಮೀಲಾಗಿತ್ತು ಎಂದು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, ಚುನಾವಣಾ ಫಲಿತಾಂಶ ನಿರಾಶಾದಾಯಕವಾಗಿದೆ ಎಂದು ಹೇಳಿದರು. ಪಿಂಚಣಿ ಪಾವತಿ ಮತ್ತು ನಗದು ಹಣ ವರ್ಗಾವಣೆಗಳು ಚುನಾವಣಾ ಪ್ರಚಾರದ ಸಂದರ್ಭದಲ್ಲೂ ಅವ್ಯಾಹತವಾಗಿ ಮುಂದುವರಿಯಿತು ಎಂದು ಅವರು ನುಡಿದರು. ‘‘ವಿಧಾನಸಭಾ ಚುನಾವಣಾ ಫಲಿತಾಂಶ ನಿರಾಶಾದಾಯಕವಾಗಿದೆ. ಚುನಾವಣಾ ಪ್ರಚಾರ ನಡೆಯುತ್ತಿದ್ದಾಗಲೂ ಮಹಿಳೆಯರಿಗೆ 10,000 ರೂ. ನಗದು ಪಾವತಿ ನಡೆಯುತ್ತಿತ್ತು. ಇಂಥ ಸಂಗತಿ ಯಾವತ್ತೂ ನಡೆದಿಲ್ಲ’’ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಗೆಹ್ಲೋಟ್ ಹೇಳಿದರು.
2023ರ ರಾಜಸ್ಥಾನ ವಿಧಾನಸಭಾ ಚುನಾವಣೆಯ ವೇಳೆ, ಯೋಜನೆಯೊಂದರಡಿ ಮೊಬೈಲ್ ಫೋನ್ ಗಳ ವಿತರಣೆಯನ್ನು ಮತ್ತು ಪಿಂಚಣಿ ಪಾವತಿಯನ್ನು ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ತಕ್ಷಣವೇ ನಿಲ್ಲಿಸಲಾಗಿತ್ತು ಎಂದು ಅವರು ಹೇಳಿದರು.
‘‘ಮತಗಳ್ಳತನ’’ಕ್ಕಾಗಿ ಚುನಾವಣಾ ಆಯೋಗದ ಮೇಲೆ ವಾಗ್ದಾಳಿ ನಡೆಸಿದ ಗೆಹ್ಲೋಟ್, ಅದು ‘‘ಮೂಕಪ್ರೇಕ್ಷಕನಾಗಿತ್ತು’’ ಎಂದರು. ‘‘ಬಿಹಾರದಲ್ಲಿ ಚುನಾವಣಾ ಆಯೋಗವು ಮೂಕಪ್ರೇಕ್ಷಕನಾಗಿತ್ತು. ಅದು ಇದನ್ನು ಯಾಕೆ ತಡೆಯಲಿಲ್ಲ? ಅದು ಮಧ್ಯಪ್ರವೇಶಿಸಲೇ ಇಲ್ಲ’’ ಎಂದು ಹೇಳಿದರು.
‘‘ನ್ಯಾಯೋಚಿತ ಚುನಾವಣೆ ನಡೆಯುವಂತೆ ಚುನಾವಣಾ ಆಯೋಗ ನೋಡಿಕೊಳ್ಳುವುದಿಲ್ಲ. ಮತಗಟ್ಟೆ ವಶೀಕರಣ ಅಥವಾ ವಂಚನೆ ನಡೆದಾಗ ಚುನಾವಣಾ ಆಯೋಗ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಇದೇ ಮತಗಳ್ಳತನ. ಇಲ್ಲಿ ಚುನಾವಣಾ ಆಯೋಗವು ಆಡಳಿತ ಪಕ್ಷದೊಂದಿಗೆ ಶಾಮೀಲಾಗಿರುವುದರಲ್ಲಿ ಸಂಶಯವೇ ಇಲ್ಲ’’ ಎಂದು ಗೆಹ್ಲೋಟ್ ನುಡಿದರು.







