SIR ಅಂತಿಮ ಪಟ್ಟಿಗೆ 3 ಲಕ್ಷ ಹೆಚ್ಚುವರಿ ಮತದಾರರನ್ನು ಸೇರ್ಪಡೆ; ಕಾಂಗ್ರೆಸ್ ಆರೋಪಕ್ಕೆ ಚುನಾವಣಾ ಆಯೋಗ ಹೇಳಿದ್ದೇನು?

ಚುನಾವಣಾ ಆಯೋಗ | Photo Credit : PTI
ಹೊಸದಿಲ್ಲಿ: ಬಿಹಾರದಲ್ಲಿ ಕೈಗೊಂಡ ತೀವ್ರ ಮತಪಟ್ಟಿ ಪರಿಷ್ಕರಣೆಯ ನಂತರ ಪ್ರಕಟಿಸಲಾದ ಅಂತಿಮ ಪಟ್ಟಿಗೆ ಮೂರು ಲಕ್ಷ ಹೆಚ್ಚುವರಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಶನಿವಾರ ಪ್ರತಿಕ್ರಿಯಿಸಿರುವ ಭಾರತೀಯ ಚುನಾವಣಾ ಆಯೋಗ, ತೀವ್ರ ಮತಪಟ್ಟಿ ಪರಿಷ್ಕರಣೆಯ ಅಂತಿಮ ಪಟ್ಟಿ ಪ್ರಕಟನೆಯ ನಂತರ ಮೂರು ಲಕ್ಷ ಮತದಾರರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಬಿಹಾರ ವಿಧಾನಸಭಾ ಚುನಾವಣೆ ಪ್ರಕಟವಾಗುವುದಕ್ಕೂ ಮುನ್ನ 7.42 ಕೋಟಿಯಷ್ಟಿದ್ದ ಬಿಹಾರ ಮತದಾರರ ಸಂಖ್ಯೆ, ಅದರ ಬೆನ್ನಿಗೇ 7.45 ಕೋಟಿಗೆ ಏರಿಕೆಯಾಗಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದರಲ್ಲಿ ಕಾಂಗ್ರೆಸ್ ಆರೋಪ ಮಾಡಿತ್ತು.
बिहार चुनाव के बीच कैसे बढ़े 3 लाख वोट? pic.twitter.com/9l0HjLccbc
— Congress (@INCIndia) November 15, 2025
ಈ ಕುರಿತು ಶನಿವಾರ ಪ್ರಕಟನೆ ಬಿಡುಗಡೆ ಮಾಡಿರುವ ಭಾರತೀಯ ಚುನಾವಣಾ ಆಯೋಗ, ಅಕ್ಟೋಬರ್ 6ರಂದು ಪ್ರಕಟಿಸಲಾಗಿದ್ದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಅಂತಿಮ ಪಟ್ಟಿಯಲ್ಲಿದ್ದ 7.42 ಲಕ್ಷ ಮತದಾರರ ಸಂಖ್ಯೆ, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ನಂತರ ಸೆಪ್ಟೆಂಬರ್ 30ರಂದು ಪ್ರಕಟಿಸಲಾಗಿದ್ದ ಅಂತಿಮ ಮತಪಟ್ಟಿಯನ್ನು ಆಧರಿಸಿತ್ತು ಎಂದು ಹೇಳಿದೆ.
ಚುನಾವಣೆ ಘೋಷಣೆಯಾದ ನಂತರ, ಪ್ರತಿ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕಕ್ಕಿಂತ ಹತ್ತು ದಿನಗಳ ಮುನ್ನ ಯಾವುದೇ ಅರ್ಹ ಮತದಾರರು ತಮ್ಮ ಹೆಸರನ್ನು ಮತಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಅರ್ಜಿ ಸಲ್ಲಿಸಬಹುದು ಎಂಬ ಚುನಾವಣಾ ನಿಯಮಗಳನ್ನು ತನ್ನ ಪ್ರಕಟನೆಯಲ್ಲಿ ಚುನಾವಣಾ ಆಯೋಗ ಉಲ್ಲೇಖಿಸಿದೆ.
Ye Hai VOTE CHORI Ka Saboot 👇 pic.twitter.com/sM8HljRxFM
— Congress (@INCIndia) November 15, 2025
ಹೀಗಾಗಿ, ಅಕ್ಟೋಬರ್ 1ರಿಂದ ಪ್ರತಿ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕಕ್ಕಿಂತ ಹತ್ತು ದಿನಗಳ ಮುನ್ನ ತಮ್ಮ ಹೆಸರನ್ನು ಮತಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಅರ್ಜಿ ಸಲ್ಲಿಸಿದ ಯಾವುದೇ ಅರ್ಹ ಅರ್ಜಿದಾರರ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಯಾವುದೇ ಅರ್ಹ ಅರ್ಜಿದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅರ್ಹ ಅರ್ಜಿದಾರರ ಹೆಸರುಗಳನ್ನು ನಿಯಮಾನುಸಾರ ಮತಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಅಕ್ಟೋಬರ್ 1ರಿಂದ ಪ್ರತಿ ಹಂತದ ನಾಮಪತ್ರ ಸಲ್ಲಿಕೆಯ ಕೊನೆಯ ದಿನಕ್ಕಿಂತ ಹತ್ತು ದಿನಗಳ ಮುಂಚೆ ಸ್ವೀಕರಿಸಿದ್ದ ಅರ್ಜಿಗಳಿಂದ ಬಿಹಾರದಲ್ಲಿನ ಒಟ್ಟು ಮತದಾರರ ಸಂಖ್ಯೆ ಮೂರು ಲಕ್ಷದಷ್ಟು ಏರಿಕೆಯಾಗಿದೆ. ಈ ಪರಿಷ್ಕೃತ ಸಂಖ್ಯೆಯನ್ನು ಮತದಾನದ ಬಳಿಕ ಚುನಾವಣಾ ಆಯೋಗ ನೀಡಿದ್ದ ಪತ್ರಿಕಾ ಪ್ರಕಟನೆಯಲ್ಲಿ ಉಲ್ಲೇಖಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಹಾರದ ಮೊದಲ ಮತ್ತು ಅಂತಿಮ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕವನ್ನು ಕ್ರಮವಾಗಿ ಅಕ್ಟೋಬರ್ 17 ಹಾಗೂ ಅಕ್ಟೋಬರ್ 20ಕ್ಕೆ ನಿಗದಿಗೊಳಿಸಲಾಗಿತ್ತು.







