ಅಸ್ಸಾಂನಲ್ಲಿ ಎಸ್ ಐ ಆರ್ ಗೆ ಆದೇಶಿಸಿದ ಚುನಾವಣಾ ಆಯೋಗ

ಚುನಾವಣಾ ಆಯೋಗ | Photo Credit : PTI
ಹೊಸದಿಲ್ಲಿ: ಅಸ್ಸಾಂನಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುವಂತೆ ಸೋಮವಾರ ಭಾರತೀಯ ಚುನಾವಣಾ ಆಯೋಗ ಆದೇಶಿಸಿದೆ.
ಜನವರಿ 1, 2026ರಿಂದ ಅಸ್ಸಾಂ ರಾಜ್ಯದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭವಾಗಲಿದೆ ಎಂದು ಅಸ್ಸಾಂ ಮುಖ್ಯ ಚುನಾವಣಾಧಿಕಾರಿಗೆ ಹೊರಡಿಸಲಾಗಿರುವ ನಿರ್ದೇಶನದಲ್ಲಿ ಹೇಳಲಾಗಿದೆ. ಈ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯು ಬಹುಶಃ ರಾಜ್ಯದಲ್ಲಿ ನಡೆಯಬೇಕಿರುವ ಮತದಾರರ ಪಟ್ಟಿಗಳ ವಾರ್ಷಿಕ ವಿಶೇಷ ಸಾರಾಂಶ ಪರಿಷ್ಕರಣೆ ಹಾಗೂ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯ ನಡುವೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಛತ್ತೀಸ್ ಗಢ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯನ್ನು ನಡೆಸಬೇಕು ಎಂದು ಕಳೆದ ತಿಂಗಳು ಚುನಾವಣಾ ಆಯೋಗ ಆದೇಶಿಸಿತ್ತು.
ಈ ಪೈಕಿ ತಮಿಳುನಾಡು, ಪುದುಚೇರಿ, ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ 2026ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. 2026ರಲ್ಲೇ ವಿಧಾನಸಭಾ ಚುನಾವಣೆ ನಡೆಯಬೇಕಿರುವ ಅಸ್ಸಾಂ ರಾಜ್ಯಕ್ಕೆ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುತ್ತದೆ.







