ರಾಷ್ಟ್ರವ್ಯಾಪಿ ಎಸ್ಐಆರ್ ಗೆ ಚುನಾವಣಾ ಆಯೋಗ ಸಿದ್ಧತೆ

ಚುನಾವಣಾ ಆಯೋಗ | PTI
ಹೊಸದಿಲ್ಲಿ,ಸೆ.7: ಬಿಹಾರದ ಮಾದರಿಯಲ್ಲಿ ರಾಷ್ಟ್ರವ್ಯಾಪಿಯಾಗಿ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯನ್ನು ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಆಂಗ್ಲದಿನಪತ್ರಿಕೆ ‘ಟೈಮ್ಸ್ ಆಫ್ ಇಂಡಿಯಾ’ ರವಿವಾರ ವರದಿ ಮಾಡಿದೆ. ಅಖಿಲ ಭಾರತ ಮಟ್ಟದಲ್ಲಿ ನಡೆಸಲಾಗುವ ಈ ಅಭಿಯಾನವು ಈ ತಿಂಗಳ ಅಂತ್ಯದಲ್ಲಿ ಅಥವಾ ಆಕ್ಟೋಬರ್ ತಿಂಗಳಲ್ಲಿ ಆರಂಭಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 10ರಂದು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಚುನಾವಣಾ ಆಯುಕ್ತರ ಸಭೆಯನ್ನು ಕರೆಯಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿರುವುದು ಈ ಬಗ್ಗೆ ಸ್ಪಷ್ಟವಾದ ಸಂದೇಶವನ್ನು ನೀಡಿದೆ. ಕಳೆದ ಮತದಾರ ಪಟ್ಟಿಯ ಪರಿಷ್ಕರಣೆಯ ದತ್ತಾಂಶ, ಹಾಲಿ ಮತದಾರರ ಸಂಖ್ಯೆ, ಮತದಾರಪಟ್ಟಿಯ ಡಿಜಿಟಲೀಕರಣ ಹಾಗೂ ಅವುಗಳನ್ನು ಸಿಇಓ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದು ಸೇರಿದಂತೆ ರಾಷ್ಟ್ರವ್ಯಾಪಿಯಾಗಿ ನಡೆಸಲಾಗುವ ಎಸ್ಐಆರ್ ನ ವಿಧಾನಗಳನ್ನು ಈ ಸಭೆಯಲ್ಲಿ ಅಂತಿಮಗೊಳಿಸಲಾಗುವುದು.
ಪ್ರತಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆಯನ್ನು 1200ಕ್ಕೆ ಮಿತಿಗೊಳಿಸುವುದು ಹಾಗೂ ಮತದಾರರ ನೋಂದಣಿ ಅಧಿಕಾರಿಗಳು (ಇಆರ್ಓ), ಹೆಚ್ಚುವರಿ ಇಆರ್ಓಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳ ಸನ್ನದ್ಧತೆಯನ್ನು ಮೌಲ್ಯಮಾಪನ ಮಾಡುವ ಬಗ್ಗೆ ಆಯೋಗವು ಮಾಹಿತಿಗಳನ್ನು ಕಲೆಹಾಕಲಿದೆ.
ಪ್ರಸ್ತಾವಿತ ಯೋಜನೆಯಡಿ ಈಗಾಗಲೇ ಎಸ್ಐಆರ್ ನಡೆದಿರುವ ಬಿಹಾರ ಹೊರತು ಪಡಿಸಿ ಎಲ್ಲಾ ರಾಜ್ಯಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮತದಾರರು ತಮಗೆ ನೀಡಲಾಗುವ ಗಣತಿ ಫಾರಂಗಳನ್ನು ಭರ್ತಿ ಮಾಡಿ ಸಹಿಹಾಕುವ ಅಗತ್ಯವಿದೆ. ಆಯುಕ್ತರ ಆದೇಶದಲ್ಲಿ ಸೂಚಿಸಲಾಗುವ ದಾಖಲೆಗಳನ್ನು ಅವರು ಸಲ್ಲಿಸಬೇಕಾಗುತ್ತದೆ.
ಭಾರತೀಯ ಚುನಾವಣಾ ಆಯೋಗವು 2025ರ ಜೂನ್ ನಲ್ಲಿ ಪ್ರಕಟಿಸಿದ ಆದೇಶವೊಂದರಲ್ಲಿ, ರಾಷ್ಟ್ರವ್ಯಾಪಿಯಾಗಿ ಎಸ್ಐಆರ್ ನಡೆಸುವ ಉದ್ದೇಶವನ್ನು ಪ್ರಕಟಿಸಿತ್ತು. ಮತದಾರಪಟ್ಟಿಯ ಸಮಗ್ರತೆಯನ್ನು ರಕ್ಷಿಸುವ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸಲು ಈ ಅಭಿಯಾನವನ್ನು ಕೈಗೊಳ್ಳುವುದಾಗಿ ಅದು ತಿಳಿಸಿತ್ತು. ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮೊದಲಿಗೆ ಆ ರಾಜ್ಯದಲ್ಲಿ ಎಸ್ಐಆರ್ ನಡೆಸಿತ್ತು.







