ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಪ್ರಧಾನಿ ನೇತೃತ್ವದಲ್ಲಿ ಶೀಘ್ರದಲ್ಲಿ ಸಭೆ

ನರೇಂದ್ರ ಮೋದಿ | PTI
ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಅವರು ಫೆಬ್ರವರಿ 18ರಂದು ನಿವೃತ್ತರಾಗಲಿದ್ದು, ಅವರ ಉತ್ತರಾಧಿಕಾರಿಯ ಆಯ್ಕೆಯನ್ನು ಅಂತಿಮಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಸಭೆ ಸೇರಲಿದೆ.
ಆಯ್ಕೆ ಸಮಿತಿಯು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒಳಗೊಂಡಿದೆ. ಹಾಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನಿವೃತ್ತಿಗೆ ಮುನ್ನ ಈ ಸಭೆ ನಡೆಯಲಿದೆ.
ರವಿವಾರ ಅಥವಾ ಸೋಮವಾರ ಸಭೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಅಧ್ಯಕ್ಷತೆಯ ಶೋಧ ಸಮಿತಿಯು ಅಂತಿಮಗೊಳಿಸಿರುವ 5 ಹೆಸರುಗಳ ಪಟ್ಟಿಯಲ್ಲಿ ರಾಜೀವ್ ಕುಮಾರ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಾಏಗುವುದು. ಆನಂತರ ಆಯ್ಕೆ ಸಮಿತಿಯ ಶಿಫಾರಸಿನ ಆಧಾರದಲ್ಲಿ ಅಧ್ಯಕ್ಷರು ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕಗೊಳಿಸಲಿದ್ದಾರೆ.
ಪ್ರಸಕ್ತ ಕೇಂದ್ರೀಯ ಚುನಾವಣಾ ಆಯೋಗವು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರು ಚುನಾವಣಾ ಆಯುಕ್ತರನ್ನು ಒಳಗೊಂಡಿದೆ. ಪ್ರಸಕ್ತ ಕೇಂದ್ರ ಚುನಾವಣಾ ಆಯೋಗದಲ್ಲಿ ಗ್ಯಾನೇಶ್ ಕುಮಾರ್ ಹಾಗೂ ಸುಖಬೀರ್ ಸಿಂಗ್ ಸಂಧು ಅವರನ್ನು ಒಳಗೊಂಡಿದೆ. ಚುನಾವಣಾ ಸಮಿತಿಯ ವರಿಷ್ಠ ಹುದ್ದೆಗೆ ಗ್ಯಾನೇಶ್ ಕುಮಾರ್ ಅವರು ಸಂಭಾವ್ಯಅಭ್ಯರ್ಥಿಯಾಗಿದ್ದಾರೆನ್ನಲಾಗಿದೆ. ಅವರು ಅಧಿಕಾರಾವಧಿಯು 2029ರ ಜನವರಿ 26ರವರೆಗೆ ಇರಲಿದೆ.
ಈವರೆಗೆ ಅತ್ಯಂತ ಹಿರಿಯ ಚುನಾವಣಾ ಆಯುಕ್ತರನ್ನು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಿಸುವ ಪರಿಪಾಠವಿತ್ತಾದರೂ ಕಳೆದ ವರ್ಷ ಸಿಇಸಿ ಹಾಗೂ ಇಸಿಗಳ ನೇಮಕಾತಿಗೆ ಸಂಬಂಧಿಸಿದ ಕಾನೂನು ಕಳೆದ ವರ್ಷ ಜಾರಿಗೊಂಡ ಬಳಿಕ ಶೋಧ ಸಮಿತಿಯು ಈ ಹುದ್ದೆಗಳ ನೇಮಕಾತಿಗೆ ಐವರು ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳ ಹೆಸರುಗಳನ್ನು ಶೋಧ ಸಮಿತಿಯು ಅಂತಿಮಗೊಳಿಸಿ ಅದನ್ನು ಆಯ್ಕೆ ಶೋಧ ಸಮಿತಿಯ ಪರಿಶೀಲನೆಗೆ ಸಲ್ಲಿಸಬೇಕಾಗುತ್ತದೆ.







