ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಪಕ್ಷದಿಂದ ವಾಗ್ದಂಡನೆ?

ಜ್ಞಾನೇಶ್ ಕುಮಾರ್ | PC : eci.gov.in
ಹೊಸದಿಲ್ಲಿ, ಆ. 18: ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿಗಾಗಿ ಭಾರತೀಯ ಚುನಾವಣಾ ಆಯೋಗವು ಭಾರೀ ಪ್ರಮಾಣದಲ್ಲಿ ‘‘ಮತಗಳ್ಳತನ’’ದಲ್ಲಿ ತೊಡಗಿದೆ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ ಬಳಿಕ, ಪ್ರತಿಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವಿನ ಸಮರ ತಾರಕಕ್ಕೇರಿದೆ. ಈಗ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಂಡನೆ ನಿರ್ಣಯವೊಂದನ್ನು ಮಂಡಿಸುವ ಬಗ್ಗೆ ಪ್ರತಿಪಕ್ಷ ‘ಇಂಡಿಯಾ’ ಮೈತ್ರಿಕೂಟ ಯೋಚಿಸುತ್ತಿದೆ.
ಮಹಾರಾಷ್ಟ್ರ, ಕರ್ನಾಟಕ ಮತ್ತು ಹರ್ಯಾಣದಲ್ಲಿ ಮತಗಳ್ಳತನ ನಡೆದಿದೆ ಎಂಬುದಾಗಿ ಲೋಕಸಭೆಯ ಪ್ರತಿಪಕ್ಷ ನಾಯಕನೂ ಆಗಿರುವ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಆಡಳಿತಾರೂಢ ಬಿಜೆಪಿಗೆ ಸಹಾಯ ಮಾಡುವುದಕ್ಕಾಗಿ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ತಿರುಚುತ್ತಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ, ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹಾದೇವಪುರ ವಿಧಾನಸಭಾ ಘಟಕದಲ್ಲಿ 1,00,250 ಮತಗಳನ್ನು ಕದಿಯಲಾಗಿದೆ ಎಂಬುದಾಗಿ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇಂಥ ಅಕ್ರಮಗಳಿಂದಾಗಿ ಬಿಜೆಪಿಯು ಲೋಕಸಭಾ ಚುನಾವಣೆಯಲ್ಲಿ ಜಯ ಗಳಿಸಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಶಾಮೀಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಂವಿಧಾನದ 324(5) ವಿಧಿಯ ಅನುಸಾರ, ಮುಖ್ಯ ಚುನಾವಣಾ ಆಯುಕ್ತರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರನ್ನು ವಜಾಗೊಳಿಸುವ ರೀತಿಯಲ್ಲೇ ವಜಾಗೊಳಿಸಬೇಕಾಗಿದೆ. ಅಂದರೆ, ಇದಕ್ಕಾಗಿ ಸಂಸತ್ನಲ್ಲಿ ವಾಗ್ದಂಡನೆ ನಿರ್ಣಯವನ್ನು ಅಂಗೀಕರಿಸಬೇಕಾಗುತ್ತದೆ.
ರಾಹುಲ್ ಗಾಂಧಿ ಆರೋಪಗಳಿಗೆ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಈ ಆರೋಪಗಳು ‘‘ಆಧಾರರಹಿತ’’ ಮತ್ತು ‘‘ಸಂವಿಧಾನಕ್ಕೆ ಮಾಡಿದ ಅವಮಾನ’’ ಎಂಬುದಾಗಿ ಬಣ್ಣಿಸಿದ್ದಾರೆ. ರಾಹುಲ್ ಒಂದೋ ತನ್ನ ಆರೋಪಗಳನ್ನು ಖಚಿತಪಡಿಸಿ ಅಫಿದಾವಿತ್ ಸಲ್ಲಿಸಬೇಕು ಇಲ್ಲವೇ ದೇಶದ ಕ್ಷಮೆ ಕೋರಬೇಕು ಎಂದು ಅವರು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್, ಚುನಾವಣಾ ಆಯೋಗವು ವ್ಯಕ್ತಿಗಳನ್ನು ನೋಡಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ‘‘ಬಿಜೆಪಿ ಸಂಸದ ಅನುರಾಗ್ ಠಾಕೂರ್ ಕೂಡ ಇಂಥದೇ ಮಾತುಗಳನ್ನು ಆಡಿದ್ದಾರೆ, ಆದರೆ ಅದು ಅವರಿಂದ ಯಾವುದೇ ಅಫಿದಾವಿತ್ ಕೇಳಿಲ್ಲ’’ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, ಮುಖ್ಯ ಚುನಾವಣಾ ಆಯುಕ್ತರ ಹೇಳಿಕೆಗಳು ಸ್ವತಂತ್ರ ಸಾಂವಿಧಾನಿಕ ಅಧಿಕಾರಿಯ ಹೇಳಿಕೆಯಂತೆ ಅನಿಸದೆ ಬಿಜೆಪಿ ಪದಾಧಿಕಾರಿಯ ಹೇಳಿಕೆಯಂತೆ ಭಾಸವಾಗುತ್ತದೆ ಎಂಬುದಾಗಿ ತಿರುಗೇಟು ನೀಡಿದ್ದಾರೆ.







