ಏಶ್ಯಾದ ಅತ್ಯಂತ ಹಿರಿಯ ಆನೆ ‘ವತ್ಸಲಾ’ ಇನ್ನಿಲ್ಲ
ಹುಟ್ಟಿದ್ದು ಕೇರಳದಲ್ಲಿ,ಬದುಕಿದ್ದು ಮಧ್ಯ ಪ್ರದೇಶದಲ್ಲಿ

PC: .indiatoday.in
ಭೋಪಾಲ: ಏಶ್ಯಾದ ಅತ್ಯಂತ ಹಿರಿಯ ಆನೆ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ‘ವತ್ಸಲಾ’ ಮಂಗಳವಾರ ಮಧ್ಯಪ್ರದೇಶದ ಪನ್ನಾದಲ್ಲಿ ಮೃತಪಟ್ಟಿದೆ. ‘ವತ್ಸಲಾ’ಳ ವಯಸ್ಸು ನೂರು ವರ್ಷಗಳನ್ನು ದಾಟಿತ್ತು ಎನ್ನಲಾಗಿದೆ.
ವತ್ಸಲಾಳನ್ನು ಕೇರಳದ ನರ್ಮದಾಪುರಂನಿಂದ ತಂದು ಪನ್ನಾ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಬಿಡಲಾಗಿತ್ತು.
ವತ್ಸಲಾ ಮೀಸಲು ಅರಣ್ಯ ಪ್ರದೇಶದಲ್ಲಿ ಅತ್ಯಂತ ಹಿರಿಯ ಆನೆಯಾಗಿದ್ದು,ಆನೆಗಳ ಗುಂಪೊಂದರ ನಾಯಕಿಯಾಗಿತ್ತು ಎಂದು ಹೇಳಿಕೆಯು ತಿಳಿಸಿದೆ.
ಇತರ ಆನೆಗಳು ಮರಿಗಳಿಗೆ ಜನ್ಮ ನೀಡುವಾಗ ವತ್ಸಲಾ ಅಜ್ಜಿಯ ಪಾತ್ರವನ್ನು ವಹಿಸುತ್ತಿತ್ತು ಮತ್ತು ಪ್ರವಾಸಿಗಳ ಪ್ರಮುಖ ಆಕರ್ಷಣೆಯಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮಂಗಳವಾರ ತನ್ನ ಮುಂಗಾಲುಗಳಿಗೆ ಮೊಳೆಗಳು ಚುಚ್ಚಿ ಗಾಯಗೊಂಡಿದ್ದ ವತ್ಸಲಾ ಮೀಸಲು ಕ್ಷೇತ್ರದ ಹಿನೌಟಾ ಪ್ರದೇಶದ ಖೈರಾಯನ್ ಕಾಲುವೆಯ ಬಳಿ ಕುಳಿತುಕೊಂಡಿತ್ತು. ಅರಣ್ಯ ಇಲಾಖೆಯು ಅದನ್ನು ಎತ್ತಲು ಪ್ರಯತ್ನಿಸಿತ್ತು,ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಗಿತ್ತಾದರೂ ಮಧ್ಯಾಹ್ನ ಅದು ಕೊನೆಯುಸಿರೆಳೆದಿತ್ತು.
ವತ್ಸಲಾಳನ್ನು ಹಿನೌಟಾ ಆನೆ ಶಿಬಿರದಲ್ಲಿ ಇರಿಸಲಾಗಿತ್ತು. ಪ್ರತಿದಿನ ಅದನ್ನು ಸ್ನಾನಕ್ಕಾಗಿ ಖೈರಾಯನ್ ಕಾಲುವೆಯ ಬಳಿ ಕರೆದೊಯ್ಯಲಾಗುತ್ತಿತ್ತು ಮತ್ತು ಆಹಾರವನ್ನಾಗಿ ಗಂಜಿಯನ್ನು ನೀಡಲಾಗುತ್ತಿತ್ತು. ವಯಸ್ಸಿನ ಕಾರಣದಿಂದ ಅದು ದೃಷ್ಟಿಯನ್ನು ಕಳೆದುಕೊಂಡಿತ್ತು ಮತ್ತು ಹೆಚ್ಚು ದೂರ ನಡೆಯಲೂ ಸಾಧ್ಯವಾಗುತ್ತಿರಲಿಲ್ಲಕ್ಷ ಪಶುವೈದ್ಯರು ಮತ್ತು ವನ್ಯಜೀವಿ ತಜ್ಞರು ಆದರ ಆರೋಗ್ಯದ ಮೇಲೆ ನಿಗಾಯಿರಿಸಿದ್ದರು ಎಂದು ಹೇಳಿಕೆಯು ತಿಳಿಸಿದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ವತ್ಸಲಾ ನಿಧನಕ್ಕೆ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ. ‘ವತ್ಸಲಾ ಕೇವಲ ಹೆಣ್ಣು ಆನೆಯಾಗಿರಲಿಲ್ಲಕ್ಷ ಅದು ನಮ್ಮ ಕಾಡುಗಳ ಮೌನ ರಕ್ಷಕ,ತಲೆಮಾರುಗಳ ಗೆಳತಿ ಮತ್ತು ಮಧ್ಯಪ್ರದೇಶದ ಸಂವೇದನೆಗಳ ಸಂಕೇತವಾಗಿತ್ತು. ಇಂದು ಅವಳು ನಮ್ಮೊಂದಿಗಿಲ್ಲ,ಆದರೆ ಅವಳ ನೆನಪುಗಳು ನಮ್ಮ ನೆಲ ಮತ್ತು ಮನಸ್ಸುಗಳಲ್ಲಿ ಸದಾ ಜೀವಂತವಾಗಿರಲಿವೆ’ ಎಂದು ಅವರು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.







