ಎಲ್ಗಾರ್ ಪರಿಷದ್ ಪ್ರಕರಣ | ವಿಲ್ಸನ್, ಧವಳೆ ಕಾರಾಗೃಹದಿಂದ ಬಿಡುಗಡೆ

ರೋನಾ ವಿಲ್ಸನ್ , ಸುಧೀರ್ ಧವಳೆ | thehindu.com
ಮುಂಬೈ: ಎಲ್ಗಾರ್ ಪರಿಷದ್-ಮಾವೋವಾದಿ ನಂಟು ಪ್ರಕರಣದ ಆರೋಪಿಗಳಾದ ಸಂಶೋಧಕ ರೋನಾ ವಿಲ್ಸನ್ ಹಾಗೂ ಸಾಮಾಜಿಕ ಹೋರಾಟಗಾರ ಸುಧೀರ್ ಧವಳೆ ಅವರನ್ನು ಜಾಮೀನಿನ ಮೇಲೆ ಶುಕ್ರವಾರ ನವಿ ಮುಂಬೈ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯದ ಮುಂದೆ ಜಾಮೀನು ಔಪಚಾರಿಕತೆಯನ್ನು ಪೂರ್ಣಗೊಳಿಸಿದ ಬಳಿಕ ಅಪರಾಹ್ನ ಸುಮಾರು 1.30ಕ್ಕೆ ಇಬ್ಬರೂ ನವಿ ಮುಂಬೈಯ ತಲೋಜಾ ಕಾರಾಗೃಹದಿಂದ ಬಿಡುಗಡೆಯಾದರು.
ಬಾಂಬೆ ಉಚ್ಚ ನ್ಯಾಯಾಲಯ ಜಾಮೀನು ನೀಡಿದ ಹದಿನೈದು ದಿನಗಳ ಬಳಿಕ ಅವರು ಬಿಡುಗಡೆಯಾಗಿದ್ದಾರೆ. ಅವರು ಈ ಪ್ರಕರಣದಲ್ಲಿ ಬಂಧಿತರಾಗಿ ಸುಮಾರು 6 ವರ್ಷಕ್ಕೂ ಅಧಿಕ ಕಾಲ ಕಾರಾಗೃಹದಲ್ಲಿ ಇದ್ದರು.
ಅವರು 2018ರಿಂದ ಕಾರಾಗೃಹದಲ್ಲಿದ್ದಾರೆ ಹಾಗೂ ಭಯೋತ್ಪಾದನಾ ವಿರೋಧಿ ಕಾಯ್ದೆ ಯುಎಪಿಎ ಅಡಿ ದಾಖಲಿಸಲಾದ ಈ ಪ್ರಕರಣದ ವಿಚಾರಣೆ ಇನ್ನು ಕೂಡ ಆರಂಭವಾಗಿಲ್ಲ ಎಂಬುದನ್ನು ಗಮನಿಸಿ ಉಚ್ಚ ನ್ಯಾಯಾಲಯ ವಿಲ್ಸನ್ ಹಾಗೂ ಧವಳೆಗೆ ಜನವರಿ 8ರಂದು ಜಾಮೀನು ನೀಡಿತ್ತು.
‘‘ಅವರು 2018ರಿಂದ ಕಾರಾಗೃಹದಲ್ಲಿ ಇದ್ದಾರೆ. ಈ ಪ್ರಕರಣದಲ್ಲಿ ಆರೋಪವನ್ನು ಇನ್ನಷ್ಟೇ ರೂಪಿಸಬೇಕಾಗಿದೆ. ಪ್ರಾಸಿಕ್ಯೂಷನ್ 300ಕ್ಕೂ ಅಧಿಕ ಸಾಕ್ಷಿಗಳನ್ನು ಉಲ್ಲೇಖಿಸಿದೆ. ಆದುದರಿಂದ ವಿಚಾರಣೆ ಸದ್ಯೋಭವಿಷ್ಯದಲ್ಲಿ ಮುಗಿಯುವ ಸಾಧ್ಯತೆ ಇಲ್ಲ’’ ಎಂದು ಜಾಮೀನು ನೀಡುವ ಸಂದರ್ಭ ಉಚ್ಚ ನ್ಯಾಯಾಲಯ ಅಭಿಪ್ರಾಯಿಸಿತ್ತು.
ಈ ಪ್ರಕರಣದಲ್ಲಿ ಧವಳೆ ಹಾಗೂ ವಿಲ್ಸನ್ ಅವರಲ್ಲದೆ, ಇತರ 14 ಶಿಕ್ಷಣ ತಜ್ಞರನ್ನು ಬಂಧಿಸಲಾಗಿತ್ತು. ಇವರಲ್ಲಿ ವರವರ ರಾವ್, ಸುಧಾ ಭಾರದ್ವಾಜ್, ಆನಂದ್ ತೇಲ್ತುಂಬ್ಡೆ, ವೆರ್ನನ್ ಗೊನ್ಸಾಲ್ವೇಸ್, ಅರುಣ್ ಪಿರೇರಾ, ಶೋಮ ಸೇನ್, ಗೌತಮ್ ನವಲಾಕಾ ಹಾಗೂ ಮಹೇಶ್ ರಾವತ್ ಮೊದಲಾದ 8 ಮಂದಿಗೆ ನ್ಯಾಯಾಲಯ ಜಾಮೀನು ನೀಡಿದೆ.
ಇವರಲ್ಲಿ ರಾವತ್ ಅವರ ಜಾಮೀನಿನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸಲ್ಲಿಸಿದ ಮೇಲ್ಮನವಿ ಸುಪ್ರೀಂ ಕೋರ್ಟ್ನಲ್ಲಿ ಇನ್ನೂ ವಿಚಾರಣೆಗೆ ಬಾಕಿ ಇರುವುದರಿಂದ ಅವರು ಈಗಲೂ ಕಾರಾಗೃಹದಲ್ಲೇ ಇದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿ ಸ್ಟಾನ್ ಸ್ವಾಮಿ ನ್ಯಾಯಾಂಗ ಬಂಧನದಲ್ಲಿದ್ದಾಗ ಮೃತಪಟ್ಟಿದ್ದರು.







