ಎಲ್ಗಾರ್ ಪರಿಷದ್ ಪ್ರಕರಣ | ಸೆ. 15ರಂದು ಸುಪ್ರೀಂ ಕೋರ್ಟ್ನಿಂದ ಮಹೇಶ್ ರಾವತ್ ಜಾಮೀನು ಅರ್ಜಿ ವಿಚಾರಣೆ

ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಸೆ. 8: ಎಲ್ಗಾರ್ ಪರಿಷತ್-ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಮಹೇಶ್ ರಾವತ್ ಅವರ ಜಾಮೀನು ಅರ್ಜಿಯನ್ನು ವೈದ್ಯಕೀಯ ನೆಲೆಯಲ್ಲಿ ಸೆಪ್ಟಂಬರ್ 15ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರ್ಧರಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಹಾಗೂ ಸತೀಶ್ ಚಂದ್ರ ಶರ್ಮಾ ಅವರನ್ನು ಒಳಗೊಂಡ ಪೀಠ, ಬಾಂಬೆ ಉಚ್ಚ ನ್ಯಾಯಾಲಯ ಜಾಮೀನು ನೀಡಿರುವ ಹೊರತಾಗಿಯೂ ತನ್ನನ್ನು ಕಾರಾಗೃಹದಲ್ಲಿರಿಸಿರುವುದನ್ನು ಪ್ರಶ್ನಿಸಿ ರಾವತ್ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸುತ್ತಿದೆ.
ರಾವತ್ ಅವರ ಜಾಮೀನು ಅರ್ಜಿಯನ್ನು ಉಚ್ಚ ನ್ಯಾಯಾಲಯ ಅಂಗೀಕರಿಸಿತ್ತು. ಆದರೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಕೋರಿಕೆಯ ಮೇರೆಗೆ ತನ್ನದೇ ಆದೇಶಕ್ಕೆ ಒಂದು ವಾರ ತಡೆ ನೀಡಿತ್ತು. ತರುವಾಯ ತಡೆಯನ್ನು ವಿಸ್ತರಿಸಿತ್ತು.
ಅವರು ರುಮಟಾಯ್ಡ್ ಸಂಧಿವಾತದಿಂದ ಬಳಲುತ್ತಿದ್ದಾರೆ. ಆದರೆ, ಅವರಿಗೆ ಅಗತ್ಯ ಇರುವ ವಿಶೇಷ ವೈದ್ಯಕೀಯ ಚಿಕಿತ್ಸೆ ಜೈಲಿನಲ್ಲಿ ಅಥವಾ ಅವರನ್ನು ತಪಾಸಣೆಗೆ ಒಳಪಡಿಸಿರುವ ಜೆಜೆ ಆಸ್ಪತ್ರೆಯಲ್ಲಿ ಲಭ್ಯವಿಲ್ಲ ಎಂದು ರಾವತ್ ಅವರ ವಕೀಲ ತಿಳಿಸಿದ್ದಾರೆ.
‘‘ಕಾರಾಗೃಹದ ಆಸ್ಪತ್ರೆ ಸ್ಥಿತಿ ಗತಿ ವರದಿ ಸಲ್ಲಿಸಿದರೆ, ನಾವು ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಬಹುದು. ಜೆಜೆ ಆಸ್ಪತ್ರೆಯಲ್ಲಿ ಇದಕ್ಕೆ ಸೌಲಭ್ಯಗಳಿಲ್ಲ’’ ಎಂದು ಅವರು ಹೇಳಿದ್ದಾರೆ.





