ಎಲ್ಗರ್ ಪರಿಷತ್ ಪ್ರಕರಣ | ಹನಿ ಬಾಬು ಅವರ ಜಾಮೀನು ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿದ ಬಾಂಬೆ ಹೈಕೋರ್ಟ್

ಬಾಂಬೆ ಹೈಕೋರ್ಟ್ | Credit : PTI
ಪುಣೆ: 2018ರ ಎಲ್ಗರ್ ಪರಿಷತ್ ಪ್ರಕರಣದಲ್ಲಿ ಐದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿರುವ ದಿಲ್ಲಿ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಹನಿ ಬಾಬು ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಮುಗಿಸಿ, ತೀರ್ಪನ್ನು ಕಾಯ್ದಿರಿಸಿದೆ.
ಹನಿ ಬಾಬು ಪರವಾಗಿ ಹಿರಿಯ ವಕೀಲ ಯುಗ್ ಮೋಹಿತ್ ಚೌಧರಿ ಹಾಜರಾಗಿ, ವಿಚಾರಣೆಯಿಲ್ಲದೆ ಆರೋಪಿ ದೀರ್ಘಾವಧಿ ಜೈಲಿನಲ್ಲಿರುವುದು ಸಂವಿಧಾನದ ವಿಧಿ 21 ಅಡಿಯಲ್ಲಿ ನೀಡಿರುವ ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ವಾದಿಸಿದರು. ವರ್ನನ್ ಗೊನ್ಸಾಲ್ವೆಸ್ ಸೇರಿದಂತೆ ಇತರ ಆರೋಪಿಗಳಿಗೆ ಇದೇ ಆಧಾರದ ಮೇಲೆ ಜಾಮೀನು ದೊರೆತಿರುವುದನ್ನು ಅವರು ಉಲ್ಲೇಖಿಸಿದರು.
“ಎರಡು ವರ್ಷಗಳ ಹಿಂದೆ ಸಲ್ಲಿಸಿದ ಅರ್ಜಿಗೆ ಇಂದಿಗೂ ಪ್ರಾಸಿಕ್ಯೂಷನ್ ಉತ್ತರ ನೀಡಿಲ್ಲ. ನ್ಯಾಯಾಲಯ ನೀಡಿದ ಒಂಭತ್ತು ತಿಂಗಳ ಗಡುವು ಮುಗಿದರೂ ವಿಚಾರಣೆ ನಡೆಯದೇ ಇರುವುದೇ ಆರೋಪಿಯ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ಚೌಧರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಯಾಗಿ, ರಾಷ್ಟ್ರೀಯ ತನಿಖಾ ದಳ (ಎನ್ಐಎ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಜಾಮೀನು ಅರ್ಜಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. “ವರ್ಣನ್ ಗೊನ್ಸಾಲ್ವೆಸ್ ಅವರಿಗೆ ಪುರಾವೆಗಳ ಕೊರತೆಯಿಂದ ಜಾಮೀನು ಸಿಕ್ಕಿತ್ತು. ಆದರೆ ಹನಿ ಬಾಬು ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆ ಮತ್ತು ರೆವಲ್ಯೂಷನರಿ ಡೆಮಾಕ್ರಟಿಕ್ ಫ್ರಂಟ್ (ಆರ್ಡಿಎಫ್) ಸಂಘಟನೆಯ ಚಟುವಟಿಕೆಗಳಲ್ಲಿ ನೇರವಾಗಿ ತೊಡಗಿಕೊಂಡಿದ್ದಾರೆ” ಎಂದು ಅವರು ವಾದಿಸಿದರು.
2020ರ ಜುಲೈ 28ರಂದು ಎನ್ಐಎ ಹನಿ ಬಾಬು ಅವರನ್ನು ಬಂಧಿಸಿತ್ತು. ಅವರು ದಿಲ್ಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ದಿವಂಗತ ಜಿಎನ್ ಸಾಯಿಬಾಬಾ ಅವರಿಗೆ ಬೆಂಬಲ ನೀಡುವ ಸಮಿತಿಯಲ್ಲೂ ಸಕ್ರಿಯರಾಗಿದ್ದರು ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ.
ಈ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್ 9ಕ್ಕೆ ಮುಂದೂಡಿದ್ದು, ಅಂತಿಮ ತೀರ್ಪು ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ.







