ಎಲ್ಗಾರ್ ಪರಿಷದ್ ಪ್ರಕರಣ: ವೆರ್ನಾನ್ ಗೊನ್ಸಾಲ್ವೆಸ್, ಅರುಣ್ ಫೆರೇರಾ ಜೈಲಿನಿಂದ ಬಿಡುಗಡೆ

ವೆರ್ನಾನ್ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರೇರಾ | Photo: PTI
ಮುಂಬೈ: ಎಲ್ಗಾರ್ ಪರಿಷದ್ ಪ್ರಕರಣದ ಆರೋಪಿಗಳಾದ ವೆರ್ನಾನ್ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರೇರಾ ಶನಿವಾರ ಮುಂಬೈನ ತಲೋಜಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಯಾವುದೇ ಭಯೋತ್ಪಾದಕ ಕೃತ್ಯದಲ್ಲಿ ಗೊನ್ಸಾಲ್ವೆಸ್ ಮತ್ತು ಫೆರೇರಾ ಅವರ ನಿಜವಾದ ಪಾಲ್ಗೊಳ್ಳುವಿಕೆ ಇಲ್ಲ ಎಂದು ಗಮನಿಸಿ ಜುಲೈ 28 ರಂದು ಸುಪ್ರೀಂ ಕೋರ್ಟ್ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು.
ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಒಂದು ವಾರದ ನಂತರ ಇಲ್ಲಿನ ವಿಶೇಷ ನ್ಯಾಯಾಲಯವು ಬಿಡುಗಡೆ ಆದೇಶವನ್ನು ಹೊರಡಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯವು ಶುಕ್ರವಾರ ಬಿಡುಗಡೆ ಆದೇಶ ಹೊರಡಿಸಿದ್ದು, ಅವರು ಇಂದು ಸಂಜೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಎಸ್ಸಿ ಪೀಠವು ಅವರಿಗೆ ಜಾಮೀನು ನೀಡಿದ್ದು, ಆರೋಪಿಗಳು ಸುಮಾರು ಐದು ವರ್ಷಗಳಿಂದ ಜೈಲಿನಲ್ಲಿ ಇದ್ದಾರೆ ಎಂಬ ಅಂಶವನ್ನು ಪರಿಗಣಿಸಿದ್ದರು. ಆರೋಪಗಳು ಗಂಭೀರವಾಗಿವೆ, ಆದರೆ ಆ ಕಾರಣಕ್ಕಾಗಿ ಮಾತ್ರ ಅವರಿಗೆ ಜಾಮೀನು ನಿರಾಕರಿಸಲಾಗುವುದಿಲ್ಲ ಎಂದು ಪೀಠ ಹೇಳಿತ್ತು.





