ಎಲ್ಗಾರ್ ಪರಿಷದ್ ಪ್ರಕರಣ: 5 ವರ್ಷಗಳ ಬಳಿಕ ಮಹೇಶ್ ರಾವುತ್ ಗೆ ಜಾಮೀನು

ಮಹೇಶ್ ರಾವುತ್ (Photo: Twitter/@LiveLawIndia)
ಮುಂಬೈ: ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 36 ವರ್ಷದ ಬುಡಕಟ್ಟು ಹಕ್ಕುಗಳ ಹೋರಾಟಗಾರ ಮಹೇಶ್ ರಾವುತ್ ಅವರಿಗೆ ಐದು ವರ್ಷಗಳ ಬಳಿಕ ಜಾಮೀನು ಸಿಕ್ಕಿದೆ. ಗುರುವಾರ ಬಾಂಬೆ ಹೈಕೋರ್ಟ್ ಅವರಿಗೆ ಜಾಮೀನು ನೀಡಿದೆ.
ಪ್ರಕರಣದ ತನಿಖೆಯನ್ನು ನಿರ್ವಹಿಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ಕೋರಿದ್ದು, ಆದರೆ, ಹೈಕೋರ್ಟ್ ಒಂದು ವಾರ ಕಾಲಾವಕಾಶ ನೀಡಿದೆ.
ನ್ಯಾಯಮೂರ್ತಿಗಳಾದ ಎ.ಎಸ್. ಗಡ್ಕರಿ ಮತ್ತು ಶರ್ಮಿಳಾ ದೇಶಮುಖ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಮಹೇಶ್ ರಾವುತ್ ರಿಗೆ ಜಾಮೀನು ಮಂಜೂರು ಮಾಡಿದೆ.
ರಾವುತ್ ವಿರುದ್ಧ ದಾಖಲಿಸಲಾದ ಯುಎಪಿಎಯ ಹಲವು ಸೆಕ್ಷನ್ಗಳು ಸಮರ್ಥನೀಯವಲ್ಲ ಎಂಬ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.
ರಾವುತ್ ರನ್ನು ಜೂನ್ 6, 2018 ರಂದು ಬಂಧಿಸಲಾಗಿತ್ತು. ಅವರು ಈಗಾಗಲೇ 1,930 ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ.
ಪುಣೆಯ ಶನಿವಾರವಾಡದಲ್ಲಿ ಡಿಸೆಂಬರ್ 31, 2017 ರಂದು ಆಯೋಜಿಸಲಾದ ಎಲ್ಗರ್ ಪರಿಷತ್ ಕಾರ್ಯಕ್ರಮಕ್ಕೆ ರಾವುತ್ ಧನಸಹಾಯ ಮಾಡಿದ್ದಾರೆ ಎಂದು ಪುಣೆ ಪೊಲೀಸರು ಆರೋಪಿಸಿದ್ದರು.





