ಎಮಿರೇಟ್ಸ್ ಏರ್ ಲೈನ್ಸ್ ಗೆ 620 ಕೋಟಿ ಡಾಲರ್ ಲಾಭ : ಸಂಸ್ಥೆಯ ಉದ್ಯೋಗಿಗಳಿಗೆ 22 ವಾರಗಳ ಬೋನಸ್ ಘೋಷಣೆ!

PC : emirates.com
ದುಬೈ: 2023-24ನೇ ಹಣಕಾಸು ವರ್ಷದಲ್ಲಿ ದಾಖಲೆಯ 620 ಕೋಟಿ ಡಾಲರ್ ಲಾಭ ಗಳಿಸಿರುವ ಎಮಿರೇಟ್ಸ್ ಏರ್ ಲೈನ್ಸ್, ಇಡೀ ವಿಶ್ವದಲ್ಲೇ ಅತ್ಯಧಿಕ ಲಾಭ ಗಳಿಸುತ್ತಿರುವ ವಿಮಾನ ಯಾನ ಸಂಸ್ಥೆಗಳ ಪೈಕಿ ತನ್ನ ಸ್ಥಾನವನ್ನು ಮತ್ತಷ್ಟು ಸುಭದ್ರಗೊಳಿಸಿಕೊಂಡಿದೆ. ಹೀಗಾಗಿ, ಈ ವಿಮಾನ ಯಾನ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಗಮನಾರ್ಹ ಪ್ರಮಾಣದ ಬೋನಸ್ ಅನ್ನು ಮಂಜೂರು ಮಾಡುವ ಮೂಲಕ, ಈ ಯಶಸ್ಸಿನ ಸಂಭ್ರಮವನ್ನು ಹಂಚಿಕೊಂಡಿದೆ.
ದುಬೈ ಮೂಲದ ಎಮಿರೇಟ್ಸ್ ಏರ್ ಲೈನ್ಸ್ ಸಂಸ್ಥೆಯು ತನ್ನ ಲಾಭಾಂಶದಲ್ಲಿ ತನ್ನ 12,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಅವರ ಮೂಲ ವೇತನಕ್ಕೆ ಸಮಾನವಾದ 22 ವಾರಗಳ ಬೋನಸ್ ಅನ್ನು ಘೋಷಿಸಿದೆ. ಈ ವಿಮಾನ ಯಾನ ಸಂಸ್ಥೆಯ ಈ ಉದಾರವಾದ ಲಾಭಾಂಶ ಹಂಚಿಕೆಯ ಕ್ರಮವು ತನ್ನ ಸಿಬ್ಬಂದಿಗಳ ಕೊಡುಗೆಯನ್ನು ಗುರುತಿಸುವ ಅದರ ಬದ್ಧತೆಯನ್ನು ತೋರಿಸುತ್ತಿದೆ ಎಂದು ವ್ಯಾಖ್ಯಾನಿಸಲಾಗಿದೆ.
2023-24ನೇ ಹಣಕಾಸು ವರ್ಷದಲ್ಲಿ ಎಮಿರೇಟ್ಸ್ ಏರ್ ಲೈನ್ಸ್ ಅಭೂತಪೂರ್ವ 620ಕೋಟಿ ಡಾಲರ್ ಲಾಭಾಂಶ ಗಳಿಕೆ ಮಾಡಿದ್ದು, ಬಲಿಷ್ಠ ಜಾಗತಿಕ ಬೇಡಿಕೆ ಹಾಗೂ ಕಾರ್ಯಾಚರಣೆಯ ದಕ್ಷತೆಯಿಂದಾಗಿ ಈ ಸಂಸ್ಥೆಯು ಈ ಸಾಧನೆ ಮಾಡಿದೆ ಎಂದು ಹೇಳಲಾಗಿದೆ.
ಈ ಸಾಧನೆಯ ಸಂಭ್ರಮವನ್ನು ಆಚರಿಸಲು, ಎಮಿರೇಟ್ಸ್ ಏರ್ ಲೈನ್ಸ್ ಸಂಸ್ಥೆಯು ತನ್ನ ಎಲ್ಲ ಉದ್ಯೋಗಿಗಳಿಗೂ ಅವರ ಮೂಲ ವೇತನಕ್ಕೆ ಸಮಾನವಾದ 22 ವಾರಗಳ ಬೋನಸ್ ಅನ್ನು ಘೋಷಿಸಿದೆ. ಇದು ಅದರ ಸಿಬ್ಬಂದಿ ವರ್ಗದ ಸದಸ್ಯರ ಮೂಲ ವೇತನದ ಸರಿಸುಮಾರು ಶೇ. 42ರಷ್ಟು ಮೊತ್ತವಾಗಿದೆ. ಈ ಬೋನಸ್ ಘೋಷಣೆಯು ಸುಮಾರು 12,000ಕ್ಕೂ ಹೆಚ್ಚು ಸಿಬ್ಬಂದಿ ವರ್ಗದ ಸದಸ್ಯರಿಗೆ ಅನ್ವಯವಾಗಲಿದೆ. ಯಾವುದೇ ಹುದ್ದೆ ಅಥವಾ ಜ್ಯೇಷ್ಠತೆಯ ಮಾನದಂಡವಿಲ್ಲದೆ, ಕ್ಷೇತ್ರಕಾರ್ಯ ಸಿಬ್ಬಂದಿಗಳಿಂದ ಹಿಡಿದು ಪೈಲಟ್ ಗಳವರೆಗೆ ಈ ಬೋನಸ್ ಘೋಷಣೆ ಅನ್ವಯವಾಗಲಿದೆ.







