ಸಂಸದ ಎಂಜಿನಿಯರ್ ರಶೀದ್ ಮೇಲೆ ತಿಹಾರ್ ಜೈಲಿನಲ್ಲಿ ಕೈದಿಗಳಿಂದ ದಾಳಿ

PC | timesofindia
ಶ್ರೀನಗರ: ಬಾರಾಮುಲ್ಲಾ ಸಂಸದ ಹಾಗೂ ಅವಾಮಿ ಇತ್ತೆಹಾದ್ ಪಾರ್ಟಿ (ಎಐಪಿ) ಮುಖ್ಯಸ್ಥ ಎಂಜಿನಿಯರ್ ರಶೀದ್ ಮೇಲೆ ತಿಹಾರ್ ಜೈಲಿನಲ್ಲಿ ಸಹ ಕೈದಿಗಳು ಹಲ್ಲೆ ನಡೆಸಿದ್ದಾರೆ ಎಂದು ಪಕ್ಷವು ಆರೋಪಿಸಿದೆ.
ಕೈದಿಗಳ ಗುಂಪೊಂದು ಅವರನ್ನು ಬಲವಾಗಿ ತಳ್ಳಿ ಅವರ ಮೇಲೆ ಗೇಟು ಎಸೆಯುವ ಪ್ರಯತ್ನ ಮಾಡಿದೆ. ಆದರೆ ರಶೀದ್ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ ಎಂದು ಪಕ್ಷ ಹೇಳಿಕೆ ನೀಡಿದೆ.
"ಗೇಟು ನೇರವಾಗಿ ಬಡಿದಿದ್ದರೆ ಅದು ಮಾರಣಾಂತಿಕವಾಗುತ್ತಿತ್ತು. ಇದು ದೈಹಿಕವಾಗಿ ಅವರನ್ನು ಘಾಸಿಗೊಳಿಸುವ ಉದ್ದೇಶಪೂರ್ವಕ ಪ್ರಯತ್ನ" ಎಂದು ಎಐಪಿ ಆಪಾದಿಸಿದೆ. ಒಂದು ವಾರದ ಹಿಂದೆ ಜೈಲಿನಲ್ಲಿ ಲಿಂಗಪರಿವರ್ತಿತ ಕೈದಿಗಳ ಜತೆಗೆ ನಡೆದ ಜಗಳದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಹಾರ್ ಜೈಲಿನ ಮೂಲಗಳು ಸ್ಪಷ್ಟಪಡಿಸಿವೆ. ಮೂವರು ಮಂಗಳಮುಖಿ ಕೈದಿಗಳನ್ನೂ ಹೊಂದಿರುವ ತಿಹಾರ್ ಜೈಲಿನ ಮೂರನೇ ಸಂಖ್ಯೆಯ ಬ್ಯಾರಕ್ ನಲ್ಲಿ ಬಾರಾಮುಲ್ಲಾ ಸಂಸದ ರಶೀದ್ ರನ್ನು ಇಡಲಾಗಿದೆ.
ದಾಳಿಗೆ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ. ಆದರೆ ಇದು ಕೊಲೆಯ ಪಿತೂರಿ ಎಂಬ ಆರೋಪಗಳು ಆಧಾರ ರಹಿತ ಎಂದು ಜೈಲಿನ ಮೂಲಗಳು ಸ್ಪಷ್ಟಪಡಿಸಿವೆ. ಪುರುಷ ಲಿಂಗಪರಿವರ್ತಿತ ಕೈದಿಗಳು ಇರುವ ಜೈಲಿನಲ್ಲೇ ಕಾಶ್ಮೀರಿಗಳನ್ನು ಇರಿಸಿ ಹಲ್ಲೆಗೆ ಪ್ರಚೋದಿಸಲಾಗುತ್ತಿದೆ ಎಂದು ಅವರ ಪಕ್ಷ ಆಪಾದಿಸಿದೆ.
ವಿಶೇಷವಾಗಿ ಕಾಶ್ಮೀರಿ ಕೈದಿಗಳನ್ನು ಗುರಿ ಮಾಡಿ ಹಲ್ಲೆ ನಡೆಸುವ ಪ್ರವೃತ್ತಿ ಕಳೆದ ಮೂರು ತಿಂಗಳಿನಿಂದ ಆರಂಭವಾಗಿದ್ದು, ಇತ್ತೀಚೆಗೆ ರಶೀದ್ ಪರ ವಕೀಲರು ಅವರನ್ನು ಭೇಟಿ ಮಾಡಿದ ವೇಳೆ ಇದು ಗಮನಕ್ಕೆ ಬಂದಿದೆ ಎಂದು ಪಕ್ಷ ಹೇಳಿಕೆ ನೀಡಿದೆ.
ಎಚ್ಐವಿ ಸೋಂಕಿತ ಲಿಂಗಪರಿವರ್ತಿತ ಕೈದಿಗಳು ಕುಖ್ಯಾತ ರೌಡಿಗಳ ಜತೆ ಸಂಪರ್ಕ ಹೊಂದಿದ್ದು, ಸಂಸದ ರಶೀದ್ ಸೇರಿದಂತೆ ಕಾಶ್ಮೀರಿಗಳನ್ನು ಉದ್ದೇಶಪೂರ್ವಕವಾಗಿ ಇದೇ ಜೈಲಿನಲ್ಲಿ ಇರಿಸಲಾಗಿದೆ ಎಂದು ವಕೀಲರು ದೂರಿದ್ದಾರೆ.







