ಗುಜರಾತ್ | ತಾನು ಪ್ರೀತಿಸಿದ್ದ ಹುಡುಗನನ್ನು ಬಾಂಬ್ ಬೆದರಿಕೆ ಪ್ರಕರಣದಲ್ಲಿ ಸಿಲುಕಿಸಲು 21 ಬಾರಿ ಬಾಂಬ್ ಬೆದರಿಕೆ ಸಂದೇಶ ರವಾನಿಸಿದ್ದ ಯುವತಿಯ ಬಂಧನ

Photo : NDTV
ಅಹಮದಾಬಾದ್: ತನ್ನ ಪ್ರೀತಿಯನ್ನು ಯುವಕನೊಬ್ಬ ನಿರಾಕರಿಸಿದ್ದರಿಂದ ಕುಪಿತಗೊಂಡ ಚೆನ್ನೈನ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಯುವತಿಯೊಬ್ಬಳು, ಆತನನ್ನು ಬಾಂಬ್ ಬೆದರಿಕೆ ಪ್ರಕರಣಲ್ಲಿ ಸಿಲುಕಿಸಲು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣ ಹಾಗೂ ಗುಜರಾತ್ ನ 12 ವಿವಿಧ ಸ್ಥಳಗಳಿಗೆ ಬಾಂಬ್ ಬೆದರಿಕೆ ಸಂದೇಶ ರವಾನಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು, ಇದರ ಬೆನ್ನಿಗೇ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಯುವತಿಯನ್ನು ರೆನೆ ಜೋಶಿಲ್ಡಾ ಎಂದು ಗುರುತಿಸಲಾಗಿದ್ದು, ತನ್ನ ಬಾಳ ಸಂಗಾತಿಯನ್ನಾಗಿಸಿಕೊಳ್ಳಬೇಕೆಂದು ಆಕೆ ಕನಸು ಕಾಣುತ್ತಿದ್ದ ಯುವಕನು, ತನ್ನ ಪ್ರೀತಿಯನ್ನು ನಿರಾಕರಿಸಿ, ಬೇರೊಬ್ಬ ಯುವತಿಯನ್ನು ವರಿಸಿದ್ದರಿಂದ, ಸೇಡು ತೀರಿಸಿಕೊಳ್ಳಲು ಆರೋಪಿ ಯುವತಿ ಮುಂದಾಗಿದ್ದಳು ಎನ್ನಲಾಗಿದೆ.
ಹೀಗಾಗಿ, ಆತನ ಜೀವನದಲ್ಲಿ ಬಿರುಗಾಳಿಯೆಬ್ಬಿಸಲು ಆತನ ಸೋಗಿನಲ್ಲಿ ಬಾಂಬ್ ಬೆದರಿಕೆ ಕರೆ ಮಾಡಿದ್ದಳು ಎಂದು ಆರೋಪಿಸಲಾಗಿದೆ. ಆಕೆ ತನ್ನ ಗುರುತು ಹಾಗೂ ಸ್ಥಳವನ್ನು ಮರೆ ಮಾಚಲು ನಕಲಿ ಇಮೇಲ್ ವಿಳಾಸಗಳು, ವರ್ಚುಯಲ್ ಪ್ರೈವೇಟ್ ನೆಟ್ ವರ್ಕ್ಸ್ ಹಾಗೂ ಡಾರ್ಕ್ ವೆಬ್ ಅನ್ನು ಬಳಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಡಿಜಿಟಲ್ ಜಾಡು ಸೇರಿದಂತೆ ವ್ಯಾಪಕ ಪ್ರಮಾಣದ ತಾಂತ್ರಿಕ ನಿಗಾವಣೆ ಇರಿಸಿದ ನಂತರ, ಶನಿವಾರ ಆಕೆಯನ್ನು ಚೆನ್ನೈನಲ್ಲಿನ ಆಕೆಯ ನಿವಾಸದಿಂದ ಅಹಮದಾಬಾದ್ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸೋಮವಾರ ಪ್ರತಿಕ್ರಿಯಿಸಿದ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಶರದ್ ಸಿಂಘಾಲ್, ಜೊಶಿಲ್ಡಾ, ನಕಲಿ ಇಮೇಲ್ ಖಾತೆಗಳನ್ನು ಸೃಷ್ಟಿಸಿದ್ದಳು. ಈ ಪೈಕಿ ಆಕೆ ವಿವಾಹವಾಗಲು ಬಯಸಿದ್ದ ದಿವಿಜ್ ಪ್ರಭಾಕರ್ ಎಂಬ ಯುವಕನ ಹೆಸರಿನಲ್ಲಿ ಸೃಷ್ಟಿಸಲಾಗಿದ್ದ ಖಾತೆಯೂ ಸೇರಿತ್ತು ಎಂದು ಹೇಳಿದ್ದಾರೆ.
ರೊಬೊಟಿಕ್ಸ್ ಇಂಜಿನಿಯರಿಂಗ್ ನಲ್ಲಿ ತರಬೇತಿ ಪಡೆದಿರುವ ಜೊಶಿಲ್ಡಾ, 2022ರಿಂದ ಚೆನ್ನೈನಲ್ಲಿರುವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಹಿರಿಯ ಸಮಾಲೋಚಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.