ಈ ವರ್ಷ ಭಾರತದ 15 ಲಕ್ಷ ಇಂಜಿನಿಯರಿಂಗ್ ಪದವೀಧರರ ಪೈಕಿ ಕೇವಲ ಶೇ.10ರಷ್ಟು ಜನರಿಗೆ ಉದ್ಯೋಗ ಭಾಗ್ಯ : ವರದಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಇಂಜಿನಿಯರಿಂಗ್ ಪದವೀಧರರಲ್ಲಿ ಉದ್ಯೋಗಾರ್ಹತೆ ಶೇ.60ಕ್ಕಿಂತ ಹೆಚ್ಚಿದೆ. ಆದರೆ ಕೇವಲ ಶೇ.45ರಷ್ಟು ಜನರು ಮಾತ್ರ ಉದ್ಯಮದ ಗುಣಮಟ್ಟವನ್ನು ಪೂರೈಸುವ ಕ್ಷಮತೆಯನ್ನು ಹೊಂದಿದ್ದಾರೆ. ಅಲ್ಲದೆ ಪ್ರಸಕ್ತ ವಿತ್ತವರ್ಷದಲ್ಲಿ ಕಾಲೇಜುಗಳಿಂದ ಹೊರಬೀಳಲಿರುವ 15 ಲಕ್ಷ ಇಂಜಿನಿಯರಿಂಗ್ ಪದವೀಧರರ ಪೈಕಿ ಕೇವಲ ಶೇ.10ರಷ್ಟು ಜನರು ಉದ್ಯೋಗಗಳನ್ನು ಪಡೆಯುವ ನಿರೀಕ್ಷೆಯಿದೆ. ಇಂಜಿನಿಯರಿಂಗ್ ಪದವೀಧರರಲ್ಲಿ ಕೌಶಲ್ಯದ ಕೊರತೆಯು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಟೀಮ್ಲೀಸ್ ಡಿಗ್ರಿ ಅಪ್ರೆಂಟಿಸ್ಶಿಪ್ನ ವರದಿಯು ಹೇಳಿದೆ.
ಇಂಜಿನಿಯರಿಂಗ್ ಹಿಂದಿನಿಂದಲೂ ಭಾರತದ ಅಭಿವೃದ್ಧಿಯ ಮೂಲಾಧಾರವಾಗಿದ್ದು, ಅತ್ಯಂತ ಆದ್ಯತೆಯ ವೃತ್ತಿ ಜೀವನ ಆಯ್ಕೆಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿರುವ ಇದು ದೇಶದ ಬದಲಾವಣೆ, ಮೂಲಸೌಕರ್ಯ ಮತ್ತು ಪ್ರಗತಿಯನ್ನು ರೂಪಿಸುತ್ತದೆ. ಭಾರತವು ಇಂಜಿನಿಯರಿಂಗ್ ಪ್ರತಿಭೆಗಳನ್ನು ಉತ್ಪಾದಿಸುವಲ್ಲಿ ಅಗ್ರಸ್ಥಾನದಲ್ಲಿದ್ದು, ಪ್ರತಿ ವರ್ಷ ಸುಮಾರು 15 ಲಕ್ಷ ಜನರು ಇಂಜಿನಿಯರಿಂಗ್ ಪದವಿಗಳನ್ನು ಪಡೆಯುತ್ತಿದ್ದಾರೆ. ಈ ಮಹತ್ತರ ಸಾಧನೆಯ ಹೊರತಾಗಿಯೂ ನಮ್ಮ ಇಂಜಿನಿಯರಿಂಗ್ ಪದವೀಧರರ ಉದ್ಯೋಗಾರ್ಹತೆಯು ಪ್ರಮುಖ ಸವಾಲು ಆಗಿಯೇ ಉಳಿದಿದೆ ಎಂದು ವರದಿಯು ತಿಳಿಸಿದೆ.
ಇಂಜಿನಿಯರಿಂಗ್ ಪದವೀಧರರಲ್ಲಿ ಹೆಚ್ಚುತ್ತಿರುವ ಕೌಶಲ್ಯದ ಕೊರತೆಯು ಅವರನ್ನು ಉದ್ಯೋಗ ಸನ್ನದ್ಧರನ್ನಾಗಿಸಲು ಹೆಚ್ಚು ಸಮಗ್ರವಾದ ವಿಧಾನದ ಅಗತ್ಯವನ್ನು ಒತ್ತಿ ಹೇಳುತ್ತಿದೆ. ಶೈಕ್ಷಣಿಕ ಜ್ಞಾನದೊಂದಿಗೆ ಪ್ರಾಯೋಗಿಕ ತರಬೇತಿಯನ್ನು ಸಂಯೋಜಿಸುವುದು ಇಂಜಿನಿಯರಿಂಗ್ ಪ್ರತಿಭೆಗಳನ್ನು ಉದ್ಯಮದ ಬೇಡಿಕೆಗಳಿಗೆ ಹೆಚ್ಚು ಅನುರೂಪವಾಗಿಸುತ್ತದೆ ಎಂದು ವರದಿಯು ತಿಳಿಸಿದೆ.
ಮುಂದಿನ 2-3 ವರ್ಷಗಳಲ್ಲಿ ಭಾರತದ ತಂತ್ರಜ್ಞಾನ ಕ್ಷೇತ್ರಕ್ಕೆ ಕೃತಕ ಬುದ್ಧಿಮತ್ತೆ (ಎಐ) ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಹೆಚ್ಚಿನ ಕೌಶಲ್ಯ ಹೊಂದಿರುವ ಹತ್ತು ಲಕ್ಷ ಕ್ಕೂ ಅಧಿಕ ಇಂಜಿನಿಯರ್ಗಳು ಅಗತ್ಯವಾಗಲಿದ್ದಾರೆ ಎಂದು ನಾಸ್ಕಾಂ ಅಂದಾಜಿಸಿದೆ. ಅಲ್ಲದೆ ಡಿಜಿಟಲ್ ಪ್ರತಿಭೆಗಳ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವು 2028ರ ವೇಳೆಗೆ ಈಗಿನ ಶೇ.25ರಿಂದ ಶೇ.30ಕ್ಕೆ ಹೆಚ್ಚುವ ಸಾಧ್ಯತೆಯಿದೆ.
ಕೃತಕ ಬುದ್ಧಿಮತ್ತೆ, ವಿದ್ಯುತ್ ವಾಹನಗಳು, ಸೆಮಿಕಂಡಕ್ಟರ್ಗಳ ಬೆಳವಣಿಗೆಯಿಂದ ಹಾಗೂ ಬೆಳೆಯುತ್ತಿರುವ ವಿದ್ಯುನ್ಮಾನ ಕೈಗಾರಿಕೆಯಿಂದ ಪ್ರೇರಿತ ಹೆಚ್ಚುತ್ತಿರುವ ಬೇಡಿಕೆಯು ಇಂಜಿನಿಯರಿಂಗ್ ಪದವೀಧರ ಉದ್ಯೋಗಾರ್ಹತೆಗೆ ಸಂಬಂಧಿಸಿದಂತೆ ಪ್ರಮುಖ ಸವಾಲನ್ನು ಎದುರಿಸುತ್ತಿದೆ.
ಸೈಬರ್ ಸೆಕ್ಯೂರಿಟಿ, ಮಾಹಿತಿ ತಂತ್ರಜ್ಞಾನ, ರೋಬೊಟಿಕ್ಸ್ ಮತ್ತು ಡೇಟಾ ಸೈನ್ಸ್ ಗಳಂತಹ ಕ್ಷೇತ್ರಗಳಲ್ಲಿ ನೈಪುಣ್ಯವನ್ನು ಉದ್ಯಮಗಳು ಹೆಚ್ಚಾಗಿ ಬಯಸುತ್ತಿರುವುದರಿಂದ ಸಾಂಪ್ರದಾಯಿಕ ಶಿಕ್ಷಣವೊಂದೇ ಸಾಕಾಗುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಈ ಕೌಶಲ್ಯ ಕೊರತೆಯನ್ನು ನೀಗಿಸುವಲ್ಲಿ ಅಗತ್ಯ ಕ್ರಮಗಳು ತಾಂತ್ರಿಕ ಶಿಕ್ಷಣದೊಂದಿಗೆ ವೃತ್ತಿಪರ ತರಬೇತಿಯ ಸಂಯೋಜನೆಯನ್ನು ಒಳಗೊಂಡಿವೆ. ರಾಷ್ಟ್ರೀಯ ಶಿಕ್ಷಣ ನೀತಿಯು ಈ ಅಗತ್ಯವನ್ನು ಗುರುತಿಸಿದೆ ಮತ್ತು ಸೈದ್ಧಾಂತಿಕ ಜ್ಞಾನವನ್ನು ನೈಜ ಜಗತ್ತಿನ ಅನ್ವಯಗಳೊಂದಿಗೆ ಬೆರೆಸುವ ಪ್ರಾಯೋಗಿಕ ಕಲಿಕೆ ಮಾದರಿಗಳು ಮತ್ತು ಅಪ್ರೆಂಟಿಸ್ಶಿಪ್ನ್ನು ಪ್ರತಿಪಾದಿಸಿದೆ.







