ಮಧ್ಯಪ್ರದೇಶ | ಪೊಲೀಸ್ ಕಾನ್ಸ್ಟೆಬಲ್ ಗಳಿಂದ ಥಳಿತ: ಎಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

ಸಾಂದರ್ಭಿಕ ಚಿತ್ರ (PTI)
ಭೋಪಾಲ, ಅ. 11: ಇಬ್ಬರು ಪೊಲೀಸ್ ಕಾನ್ಸ್ಟೆಬಲ್ ಗಳಿಂದ ಥಳಿತಕ್ಕೊಳಗಾಗಿ 22 ವರ್ಷದ ಎಂಜಿನಿಯರ್ ವಿದ್ಯಾರ್ಥಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಭೋಪಾಲದಲ್ಲಿ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಯನ್ನು ಉದಿತ್ ಗಾಯ್ಕಿ ಎಂದು ಗುರುತಿಸಲಾಗಿದೆ. ಈತ ಅಂತಿಮ ವರ್ಷದ ಬಿಟೆಕ್ ವಿದ್ಯಾರ್ಥಿ. ಉದಿತ್ ಗಾಯ್ಕಿ ಔತಣಕೂಟ ಮುಗಿಸಿಕೊಂಡು ಗುರುವಾರ ರಾತ್ರಿ 1.30ಕ್ಕೆ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ ಗಳಾದ ಸಂತೋಷ್ ಬಮ್ನಿಯಾ ಹಾಗೂ ಸೌರಭ್ ಆರ್ಯನನ್ನು ಅಮಾನತುಗೊಳಿಸಲಾಗಿದೆ ಎಂದು ಭೋಪಾಲ ವಲಯ-2ರ ಉಪ ಪೊಲೀಸ್ ಆಯುಕ್ತ ವಿವೇಕ್ ಸಿಂಗ್ ತಿಳಿಸಿದ್ದಾರೆ.
‘‘ಉದಿತ್ ಗಾಯ್ಕಿ ಸೇರಿದಂತೆ ಮೂವರು ಯುವಕರು ಬಾಟಲಿಗಳನ್ನು ರಸ್ತೆಗಳಲ್ಲಿ ಒಡೆಯುತ್ತಿದ್ದರು. ಆಗ ಬೈಕ್ ನಲ್ಲಿ ಗಸ್ತು ನಡೆಸುತ್ತಿದ್ದ ಕಾನ್ಸ್ಟೆಬಲ್ ಗಳು ಅವರತ್ತ ತೆರಳಿದರು. ಈ ಸಂದರ್ಭ ಇತರ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಪರಾರಿಯಾದರು. ಆದರೆ, ಪೊಲೀಸ್ ಕಾನ್ಸ್ಟೆಬಲ್ ಗಳನ್ನು ಕಂಡ ಉದಿತ್ ಗಾಯ್ಕಿ ಓಡಿಸಲು ಆರಂಭಿಸಿದ’’ ಎಂದು ಸಿಂಗ್ ತಿಳಿಸಿದ್ದಾರೆ.
ಪೊಲೀಸ್ ಳು ಆತನನ್ನು ಸೆರೆ ಹಿಡಿದರು. ಈ ಸಂದರ್ಭ ಅವರು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ ಎಂದು ಅವರು ಹೇಳಿದ್ದಾರೆ.
‘‘ಔತಣ ಕೂಟ ಮುಗಿಸಿದ ಬಳಿಕ ನಾನು ಗಾಯ್ಕಿಯನ್ನು ಬಿಡಲು ಆತನ ಮನೆಗೆ ಹೋಗುತ್ತಿದ್ದೆವು. ಈ ಸಂದರ್ಭ ಪೊಲೀಸರು ನಮ್ಮನ್ನು ನೋಡಿದರು. ಗಾಯ್ಕಿ ಓಡಿದ. ಪೊಲೀಸರು ಆತನನ್ನು ಅಟ್ಟಿಸಿಕೊಂಡು ಹೋದರು’’ ಎಂದು ಗಾಯ್ಕಿಯ ಗೆಳೆಯನೊಬ್ಬ ತಿಳಿಸಿದ್ದಾನೆ.
ಅನಂತರ ನನಗೆ ಜಗಳದ ಸದ್ದು ಕೇಳಿತು. ನಾವು ಅಲ್ಲಿಗೆ ತಲುಪಿದಾಗ ಗಾಯ್ಕಿಯ ಅಂಗಿ ಹರಿದಿತ್ತು. ಆತನ ದೇಹದ ಮೇಲೆ, ಮುಖ್ಯವಾಗಿ ತಲೆಯಲ್ಲಿ ಗಾಯವಾಗಿತ್ತು ಎಂದು ಆತ ತಿಳಿಸಿದ್ದಾನೆ.
ಗಾಯ್ಕಿಯನ್ನು ಥಳಿಸುವುದನ್ನು ನಿಲ್ಲಿಸಲು 10 ಸಾವಿರ ಲಂಚ ನೀಡುವಂತೆ ಕಾನ್ಸ್ಟೆಬಲ್ಗಳು ಬೇಡಿಕೆ ಇರಿಸಿದ್ದರು ಎಂದು ಆತ ಆರೋಪಿಸಿದ್ದಾನೆ.
ಈ ಘಟನೆಯ ಸಿಸಿಟಿವಿ ದೃಶ್ಯ ಸಾಮಾಜಿಕ ಮಾದ್ಯಮದಲ್ಲಿ ಹರಡಿದೆ. ವೀಡಿಯೊದಲ್ಲಿ ಓರ್ವ ಪೊಲೀಸ್ ಕಾನ್ಸ್ಟೆಬಲ್ ಗಾಯ್ಕಿಯನ್ನು ಹಿಡಿದುಕೊಂಡಿರುವುದು ಹಾಗೂ ಇನ್ನೋರ್ವ ಕಾನ್ಸ್ಟೆಬಲ್ ಆತನಿಗೆ ಲಾಠಿಯಿಂದ ಥಳಿಸುತ್ತಿರುವುದು ಕಂಡು ಬಂದಿದೆ.







