ಜವಾನ ಹುದ್ದೆ: 'ಸೈಕಲ್ ಟೆಸ್ಟ್' ಗೆ ಸಾಲುಗಟ್ಟಿದ ಎಂಜಿನಿಯರ್ ಗಳು!

ಸಾಂದರ್ಭಿಕ ಚಿತ್ರ (Photo: businesstoday.in)
ಕೊಚ್ಚಿನ್: ಈ ಹುದ್ದೆಗೆ ಅರ್ಹತೆ ಏಳನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಸೈಕಲ್ ಸವಾರಿ ಗೊತ್ತಿರಬೇಕು. ಆದರೆ ಕೇರಳದ ಎರ್ನಾಕುಲಂ ಸರ್ಕಾರಿ ಕಚೇರಿಯಲ್ಲಿ ಜವಾನ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ಬಿಟೆಕ್ ಪದವೀಧರರು ಮತ್ತು ಸಾಮಾನ್ಯ ಪದವೀಧರರು ಸಾಲುಗಟ್ಟಿ ನಿಂತಿದ್ದರು. ಜವಾನ ಹುದ್ದೆಗೆ ಮಾಸಿಕ ವೇತನ ರೂ. 23 ಸಾವಿರ!
"ಇದು ಉದ್ಯೋಗ ಭದ್ರತೆಯ ವಿಚಾರ. ದ್ವಿಚಕ್ರ ವಾಹನ ಸೇವೆ ಅಥವಾ ಆಹಾರ ವಿತರಣೆ ಮಾಡುವ ಪ್ಲಾಟ್ಫಾರಂಗಳಂತೆ ಯಾವುದೇ ಅಪಾಯ ಸಾಧ್ಯತೆಗಳಿಲ್ಲ" ಎಂದು ಆಕಾಂಕ್ಷಿಯೊಬ್ಬರು ವಿವರಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಪಾಳಿಯ ಸಮಸ್ಯೆಯೂ ಇಲ್ಲ ಎನ್ನುವುದು ಮತ್ತೊಬ್ಬರ ಅನಿಸಿಕೆ.
ಆಸಕ್ತದಾಯಕ ವಿಚಾರವೆಂದರೆ ಸೈಕಲ್ ಈಗ ಸಾರಿಗೆ ವಿಧಾನವಲ್ಲ; ಆದಾಗ್ಯೂ ನಿಯಮ ಬದಲಾಗಿಲ್ಲ. 101 ಅಭ್ಯರ್ಥಿಗಳು ಸೈಕಲ್ ಟೆಸ್ಟ್ ಉತ್ತೀರ್ಣರಾಗಿದ್ದಾರೆ. ಅಂತಿಮ ರ್ಯಾಂಕ್ ಪಟ್ಟಿಯನ್ನು ಎದುರು ನೋಡುತ್ತಿದ್ದಾರೆ.
"ನಾವು ರಾಜ್ಯ ವಿದ್ಯುತ್ ಇಲಾಖೆಯಲ್ಲಿ ಉದ್ಯೋಗ ಪಡೆದರೆ ವೇತನ ಇನ್ನೂ ಹೆಚ್ಚು. ಮಾಸಿಕ 30 ಸಾವಿರಕ್ಕಿಂತ ಅಧಿಕ ಎಂದು ಕೊಚ್ಚಿ ಮೂಲದ ಕೆ.ಪ್ರಶಾಂತ್ ಹೇಳುತ್ತಾರೆ. ಬ್ಯಾಂಕಿಂಗ್ ಡಿಪ್ಲೋಮಾ ಹೊಂದಿರುವ ಇವರು ಸದ್ಯಕ್ಕೆ ಕೆಫೆ ನಡೆಸುತ್ತಿದ್ದಾರೆ. "ಕಳೆದ ಕೆಲ ವರ್ಷಗಳಿಂದ ನಾನು ಸುರಕ್ಷಿತ ಮತ್ತು ಉತ್ತಮ ಆದಾಯದ ಉದ್ಯೋಗಕ್ಕಾಗಿ ಕಾಯುತ್ತಿದ್ದೇನೆ" ಎಂದು ಪರೀಕ್ಷೆಗೆ ಕಾಯುತ್ತಿದ್ದ ಅವರು ವಿವರಿಸಿದರು.







