ಆಟೊ ಸೆಟ್ಲ್ಮೆಂಟ್ ಮೂಲಕ ಪಿಎಫ್ ಹಣ ಹಿಂಪಡೆಯುವಿಕೆ ಮಿತಿ 5 ಲಕ್ಷ ರೂ.ಗೆ ಏರಿಕೆ

ಹೊಸದಿಲ್ಲಿ: ಉದ್ಯೋಗಿಗಳು ತಮ್ಮ ಭವಿಷ್ಯನಿಧಿ ಖಾತೆಗಳಿಂದ ಆಟೊ ಸೆಟ್ಲ್ಮೆಂಟ್ ಅಥವಾ ಸ್ವಯಂ ಇತ್ಯರ್ಥ ರೀತಿಯಲ್ಲಿ ಮುಂಗಡವಾಗಿ ಹಣವನ್ನು ಹಿಂಪಡೆಯುವ ಗರಿಷ್ಠ ಮಿತಿಯನ್ನು ಒಂದು ಲ.ರೂ.ಗಳಿಂದ ಐದು ಲ.ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರು ಮಂಗಳವಾರ ಪ್ರಕಟಿಸಿದರು.
ಸರಕಾರದ ನಿರ್ಧಾರವು ಪಿಎಫ್ ಸದಸ್ಯರು ಮೂರು ದಿನಗಳಲ್ಲಿ ತಮ್ಮ ಖಾತೆಗಳಿಂದ ಐದು ಲ.ರೂ.ವರೆಗಿನ ಮೊತ್ತವನ್ನು ಹಿಂಪಡೆಯಲು ಅವಕಾಶ ಒದಗಿಸುತ್ತದೆ.
ಪ್ರಸ್ತುತ ಮೂರು ದಿನಗಳ ಗಡುವು ಹೊಂದಿರುವ ಆಟೋ ಸೆಟ್ಲ್ಮೆಂಟ್ ವಿಧಾನದ ಮೂಲಕ ಹಿಂಪಡೆಯವಬಹುದಾದ ಗರಿಷ್ಠ ಹಣವು ಒಂದು ಲ.ರೂ.ಗೆ ಸೀಮಿತವಾಗಿದೆ.
ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ (ಇಪಿಎಫ್ಒ) ಆಟೊ ಸೆಟ್ಲ್ಮೆಂಟ್ ಮಿತಿಯನ್ನು ಒಂದು ಲ.ರೂ.ಗಳಿಂದ ಐದು ಲ.ರೂ.ಗಳಿಗೆ ಹೆಚ್ಚಿಸಿದ್ದು,ಇದು ಸದಸ್ಯರಿಗೆ ತುರ್ತು ಅಗತ್ಯಗಳ ಸಮಯದಲ್ಲಿ ತ್ವರಿತವಾಗಿ ಹಣವನ್ನು ಹಿಂಪಡೆಯಲು ನೆರವಾಗುತ್ತದೆ. ಇದರಿಂದ ಲಕ್ಷಾಂತರ ಸದಸ್ಯರಿಗೆ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಮಾಂಡವೀಯ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಏಳು ಕೋಟಿಗೂ ಅಧಿಕ ಸದಸ್ಯರನ್ನು ಹೊಂದಿರುವ ಇಪಿಎಫ್ಒ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವವರಿಗೆ ತ್ವರಿತ ನೆರವನ್ನು ಒದಗಿಸಲು ಮೊದಲ ಬಾರಿಗೆ ಆನ್ಲೈನ್ ಸ್ವಯಂ ಇತ್ಯರ್ಥ ಸೌಲಭ್ಯವನ್ನು ಪರಿಚಯಿಸಿತ್ತು. ಆಗಿನಿಂದ ಈ ಸೌಲಭ್ಯವನ್ನು ಅನಾರೋಗ್ಯ,ಶಿಕ್ಷಣ,ಮದುವೆ ಮತ್ತು ವಸತಿ ಉದ್ದೇಶಗಳಿಗಾಗಿ ವಿಸ್ತರಿಸಲಾಗಿದೆ.
ಯಾವುದೇ ಕಚೇರಿ ಅಲೆದಾಟವಿಲ್ಲದೆ ಸದಸ್ಯರು ಮುಂಗಡವಾಗಿ ಹಣ ಹಿಂಪಡೆಯಲು ಸಲ್ಲಿಸುವ ಅರ್ಜಿಗಳನ್ನು ಸಿಸ್ಟಮ್ ಸ್ವಯಂಚಾಲಿತವಾಗಿ ಸಂಸ್ಕರಿಸುತ್ತದೆ,ತನ್ಮೂಲಕ ತ್ವರಿತ ಹಣಪಾವತಿ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ.
ವಿತ್ತವರ್ಷ 2025ರಲ್ಲಿ ಇಪಿಎಫ್ಒ ಆಟೋ ಸೆಟ್ಲ್ಮೆಂಟ್ ಮೂಲಕ ದಾಖಲೆಯ 2.34 ಕೋ.ಕ್ಲೈಮ್ಗಳನ್ನು ಇತ್ಯರ್ಥಗೊಳಿಸಿದ್ದು,ಇದು ವಿತ್ತವರ್ಷ 2024ರಲ್ಲಿ ಈ ವಿಧಾನದ ಮೂಲಕ ಇತ್ಯರ್ಥಗೊಳಿಸಿದ್ದ 89.52 ಕ್ಲೈಮ್ಗಳಿಗೆ ಹೋಲಿಸಿದರೆ ಶೇ.161ರಷ್ಟು ಅಧಿಕವಾಗಿದೆ.