ಇಪಿಎಫ್ಒಗೆ ಶೀಘ್ರವೇ ಹೊಸ ರೂಪ; ಎಟಿಎಂ ಮೂಲಕವೂ ಹಣ ಪಡೆಯಬಹುದು

PC : EPFO
ಹೈದರಾಬಾದ್: ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ(ಇಪಿಎಫ್ಒ)ಯು ಶೀಘ್ರವೇ ‘ಇಪಿಎಫ್ಒ 3.0 ಆವೃತ್ತಿ’ಗೆ ಚಾಲನೆ ನೀಡಲಿದ್ದು, ಇದು ಚಂದಾದಾರರಿಗೆ ಎಟಿಎಮ್ಗಳ ಮೂಲಕ ಹಣವನ್ನು ಹಿಂಪಡೆಯಲು ಅವಕಾಶ ನೀಡುವ ಜೊತೆಗೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಪ್ರಕಟಿಸಿದ್ದಾರೆ.
ಗುರುವಾರ ಇಲ್ಲಿ ಇಪಿಎಫ್ಒ ತೆಲಂಗಾಣ ವಲಯ ಕಚೇರಿ ಮತ್ತು ಪ್ರಾದೇಶಿಕ ಕಚೇರಿ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು,ಮುಂಬರುವ ದಿನಗಳಲ್ಲಿ ‘ಇಪಿಎಫ್ಒ 3.0 ಆವೃತ್ತಿ’ ಬರಲಿದೆ,ಇದರೊಂದಿಗೆ ಇಪಿಎಫ್ಒ ಬ್ಯಾಂಕ್ನಂತೆ ಕಾರ್ಯ ನಿರ್ವಹಿಸಲಿದೆ. ಬ್ಯಾಂಕ್ನಲ್ಲಿ ವಹಿವಾಟುಗಳನ್ನು ನಡೆಸುವಂತೆ ಚಂದಾದಾರರು ಸಾರ್ವತ್ರಿಕ ಖಾತೆ ಸಂಖ್ಯೆ(ಯುಎಎನ್) ಮೂಲಕ ತಮ್ಮ ಎಲ್ಲ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಚಂದಾದಾರರು ಇಪಿಎಫ್ಒ ಕಚೇರಿಗೆ ಅಥವಾ ತಮ್ಮ ಉದ್ಯೋಗದಾತರ ಬಳಿಗೆ ಹೋಗಬೇಕಿಲ್ಲ. ಅದು ಅವರ ಹಣವಾಗಿದೆ ಮತ್ತು ತಮಗೆ ಬೇಕಾದಾಗ ಅವರು ಅದನ್ನು ಹಿಂದೆಗೆದುಕೊಳ್ಳಬಹುದು. ಚಂದಾದಾರರು ಇಪಿಎಫ್ಒ ಕಚೇರಿಗೆ ಭೇಟಿ ನೀಡುವುದು ಈಗಲೂ ಅಗತ್ಯವಾಗಿದೆ,ಆದರೆ ಮುಂಬರುವ ದಿನಗಳಲ್ಲಿ ಅವರು ತಮಗೆ ಬೇಕಾದಾಗ ಎಟಿಎಂ ಮೂಲಕ ಹಣವನ್ನು ಪಡೆಯಬಹುದು. ಇಪಿಎಫ್ಒ ಇಂತಹ ಮಹತ್ವದ ಬದಲಾವಣೆಗಳನ್ನು ತರಲಿದೆ ಎಂದು ಹೇಳಿದರು.
ಇದೇ ವೇಳೆ ಗುಜರಾತಿನ ನರೋಡಾದಲ್ಲಿ ಪ್ರಾದೇಶಿಕ ಕಚೇರಿಯನ್ನು ವರ್ಚುವಲ್ ಆಗಿ ಉದ್ಘಾಟಿಸಿದ ಸಚಿವರು ಹರ್ಯಾಣದ ಗುರುಗ್ರಾಮದಲ್ಲಿ ಸಿಬ್ಬಂದಿಗಳ ವಸತಿಗೃಹ ಸಂಕೀರ್ಣಕ್ಕೆ ಶಿಲಾನ್ಯಾಸವನ್ನೂ ನೆರವೇರಿಸಿದರು.
ದೂರುಗಳು ಕಡಿಮೆಯಾಗುತ್ತಿವೆ ಮತ್ತು ಸೇವೆಗಳು ಹೆಚ್ಚುತ್ತಿವೆ ಎಂದು ಹೇಳಿದ ಮಾಂಡವಿಯಾ, ಇಪಿಎಫ್ಒ ಮತ್ತು ಅದರ ಕಾರ್ಯಶೈಲಿ ಜನಪರ ನಿಲುವಿನೊಂದಿಗೆ ಬದಲಾಗಿವೆ. ಹಣ ವರ್ಗಾವಣೆ,ಚಂದಾದಾರರ ಹೆಸರುಗಳಲ್ಲಿ ಬದಲಾವಣೆಗಳು,ಯಾವುದೇ ಬ್ಯಾಂಕಿನಿಂದ ಪಿಂಚಣಿ ಪಡೆಯುವಿಕೆ ಸೇರಿದಂತೆ ಹಲವಾರು ಸುಧಾರಣೆಗಳನ್ನು ತರಲಾಗಿದೆ ಎಂದು ತಿಳಿಸಿದರು.







