‘ಇಂಫಾಲ ಕಣಿವೆಯಲ್ಲಿ ಜನಾಂಗೀಯ ಶುದ್ಧೀಕರಣ ಪೂರ್ಣ’
ಕೇಂದ್ರ,ರಾಜ್ಯ ಸರಕಾರಗಳ ವಿರುದ್ಧ ಚಿದಂಬರಂ ದಾಳಿ

ಪಿ.ಚಿದಂಬರಂ | Photo: PTI
ಹೊಸದಿಲ್ಲಿ: ಮಣಿಪುರದ ಇಂಫಾಲ ಕಣಿವೆಯಲ್ಲಿ ‘ಜನಾಂಗೀಯ ಶುದ್ಧೀಕರಣ ಪೂರ್ಣಗೊಂಡಿದೆ ’ ಎಂದು ರವಿವಾರ ಆರೋಪಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು, ಇದಕ್ಕಿಂತ ಹೆಚ್ಚು ನಾಚಿಕೆಗೇಡಿನ ಸಂಗತಿ ಇನ್ನೊಂದಿಲ್ಲ ಎಂದು ಹೇಳಿದ್ದಾರೆ.
ಇಂಫಾಲದಲ್ಲಿಯ ಕೊನೆಯ ಐದು ಕುಕಿ ಕುಟುಂಬಗಳನ್ನು ಅಧಿಕಾರಿಗಳು ಬಲವಂತದಿಂದ ಮನೆಗಳಿಂದ ತೆರವುಗೊಳಿಸಿದ್ದಾರೆ ಎಂಬ ಮಾಧ್ಯಮ ವರದಿಯನ್ನು ತನ್ನ ಪೋಸ್ಟ್ನಲ್ಲಿ ಉಲ್ಲೇಖಿಸಿರುವ ಚಿದಂಬರಂ, ಅಂದರೆ ಮೈತೆಯಿ ಪ್ರಾಬಲ್ಯದ ಇಂಫಾಲ ಕಣಿವೆಯಲ್ಲಿ ‘ಜನಾಂಗೀಯ ಶುದ್ಧೀಕರಣ ’ ಪೂರ್ಣಗೊಂಡಿದೆ.
ಈ ಜನಾಂಗೀಯ ಶುದ್ಧೀಕರಣದ ನೇತೃತ್ವ ರಾಜ್ಯ ಸರಕಾರದ್ದಾಗಿದೆ. ರಾಜ್ಯ ಸರಕಾರವು ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತಿದೆ ಎಂದು ಕೇಂದ್ರ ಸರಕಾರವು ಬೆನ್ನು ತಟ್ಟುತ್ತಿದೆ. ಇದಕ್ಕಿಂತ ಹೆಚ್ಚು ನಾಚಿಕೆಗೇಡಿನ ಸಂಗತಿ ಬೇರೊಂದಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ದೇಶದಲ್ಲಿ ಅರಾಜಕತೆಯ ಹೊಸ ಕನಿಷ್ಠ ಮಟ್ಟವನ್ನು ಸೂಚಿಸುತ್ತಿದೆ ಎಂದು ಅವರು ಕುಟುಕಿದ್ದಾರೆ.
ಜನಾಂಗೀಯ ಹಿಂಸಾಚಾರಗಳಿಗೆ ಈವರೆಗೆ 160ಕ್ಕೂ ಅಧಿಕ ಜನರು ಬಲಿಯಾಗಿರುವ ಮಣಿಪುರದಲ್ಲಿ ಶೇ.53ರಷ್ಟು ಜನರು ಮೈತೆಯಿ ಸಮುದಾಯಕ್ಕೆ ಸೇರಿದ್ದು, ಹೆಚ್ಚಾಗಿ ಇಂಫಾಲ ಕಣಿವೆಯಲ್ಲಿ ವಾಸವಾಗಿದ್ದರೆ, ಶೇ.40ರಷ್ಟಿರುವ ಕುಕಿಗಳು ಮತ್ತು ನಾಗಾಗಳು ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸವಿದ್ದಾರೆ.







