“ಘಟನೆ ನಡೆದು ವರ್ಷಗಳು ಉರುಳಿದರೂ, ದುಃಸ್ವಪ್ನದಂತೆ ಕಾಡುತ್ತಿರುತ್ತದೆ” : ಬಿಲ್ಕಿಸ್ ಪ್ರಕರಣದ ಸಾಕ್ಷಿ
ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಎಂದ ಸಾಕ್ಷಿ, ಬಿಲ್ಕಿಸ್ ಸಹೋದರ
ಬಿಲ್ಕಿಸ್ ಬಾನು
ಅಹ್ಮದಾಬಾದ್: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಘಟನೆ ನಡೆದಾಗ ಅಪ್ರಾಪ್ತ ವಯಸ್ಕನಾಗಿದ್ದ ಪ್ರಕರಣದ ಏಕೈಕ ಸಾಕ್ಷಿ, ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಅಥವಾ ಜೀವಮಾನವಿಡೀ ಜೈಲಿನಲ್ಲಿ ಕೂಡಿಹಾಕಬೇಕು ಎಂದು ಹೇಳಿದ್ದಾನೆ.
ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು 14 ಜನರ ಹತ್ಯೆಗಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳನ್ನು ಅವಧಿಗೆ ಮುನ್ನವೇ ಬಿಡುಗಡೆಗೊಳಿಸಿದ್ದ ಗುಜರಾತ್ ಸರಕಾರದ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯವು ಜ.8ರಂದು ರದ್ದುಗೊಳಿಸಿತ್ತು.
ಸುದ್ದಿಸಂಸ್ಥೆಯ ವರದಿಯಂತೆ 2002ರ ಗೋಧ್ರಾ ಗಲಭೆಗಳ ಸಂದರ್ಭದಲ್ಲಿ ಕೇವಲ ಏಳು ವರ್ಷದವನಾಗಿದ್ದ ಸಾಕ್ಷಿ ಕೋಮು ಹಿಂಸಾಚಾರದಲ್ಲಿ ತೊಡಗಿದ್ದ ದುಷ್ಕರ್ಮಿಗಳಿಂದಾಗಿ ತನ್ನ ತಾಯಿ ಮತ್ತು ಹಿರಿಯ ಸೋದರಿಯನ್ನು ಕಳೆದುಕೊಂಡಿದ್ದ.
‘ನನ್ನ ಪ್ರೀತಿಪಾತ್ರರನ್ನು ನನ್ನ ಕಣ್ಣೆದುರೇ ಹತ್ಯೆ ಮಾಡಿದ್ದನ್ನು ನೋಡಿದ ನೋವನ್ನು ನಾನು ಉಂಡಿದ್ದೇನೆ. ಇಷ್ಟೆಲ್ಲ ವರ್ಷಗಳ ಬಳಿಕವೂ ಆ ಕ್ಷಣಗಳು ನನ್ನನ್ನು ಕಾಡಿದಾಗ ನಾನು ನಿದ್ರೆಯಲ್ಲಿ ಎಚ್ಚರಗೊಂಡು ಕೂಗುತ್ತಿರುತ್ತೇನೆ’ ಎಂದು ಅಹ್ಮದಾಬಾದ್ ನಲ್ಲಿ ತನ್ನ ಪತ್ನಿ ಮತ್ತು ಐದರ ಹರೆಯದ ಮಗನೊಂದಿಗೆ ವಾಸವಿರುವ ಈಗ 28 ಹರೆಯದ ಪ್ರತ್ಯಕ್ಷದರ್ಶಿಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಪ್ರತ್ಯಕ್ಷದರ್ಶಿ ಬಿಲ್ಕಿಸ್ ಬಾನುವಿನ ಸೋದರ ಸಂಬಂಧಿಯಾಗಿದ್ದಾನೆ.
ಗಲಭೆಯ ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಕೊಳ್ಳಲು ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದ 17 ಜನರ ಗುಂಪು ದಾಹೋಡ್ ಜಿಲ್ಲೆಯ ಲಿಂಖೇಡಾ ತಾಲೂಕಿನ ಸ್ವಗ್ರಾಮ ರಂಧಿಕಪುರವನ್ನು ತೊರೆದು ಅರಣ್ಯದ ಮೂಲಕ ದೇವಘಡ ಬರಿಯಾ ಪಟ್ಟಣದತ್ತ ತೆರಳುತ್ತಿತ್ತು ಎಂದು ಆಗ ಬಾಲಕನಾಗಿದ್ದ ಪ್ರತ್ಯಕ್ಷದರ್ಶಿಗೆ ಆಶ್ರಯ ನೀಡಿದ್ದ ಸಾಮಾಜಿಕ ಕಾರ್ಯಕರ್ತರೋರ್ವರು ತಿಳಿಸಿದರು.
ಬಿಲ್ಕಿಸ್ ಬಾನು,ಈ ಬಾಲಕ, ಆತನ ತಾಯಿ ಮತ್ತು ಹಿರಿಯ ಸೋದರಿ ಕೂಡ ಮಾರ್ಚ್ 3ರಂದು ದುಷ್ಕರ್ಮಿಗಳಿಂದ ದಾಳಿಗೀಡಾಗಿದ್ದ ಈ ಗುಂಪಿನಲ್ಲಿದ್ದರು. 17ಜನರ ಪೈಕಿ ಮಗು ಸೇರಿದಂತೆ 14 ಜನರನ್ನು ಕೊಂದಿದ್ದ ದುಷ್ಕರ್ಮಿಗಳ ಗುಂಪು ಬಳಿಕ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರವೆಸಗಿತ್ತು. ಬಿಲ್ಕಿಸ್ ಮತ್ತು ಈ ಬಾಲಕನನ್ನು ಕೊಲ್ಲಲು ಗುಂಪು ಪ್ರಯತ್ನಿಸಿತ್ತಾದರೂ ಅವರು ಹೇಗೋ ಬದುಕುಳಿದಿದ್ದರು. ಎಲ್ಲರೂ ಸತ್ತಿದ್ದಾರೆ ಎಂದು ಭಾವಿಸಿದ್ದ ಗುಂಪು ಅಲ್ಲಿಂದ ತೆರಳಿತ್ತು. ದಾಳಿಯಲ್ಲಿ ನಾಲ್ಕರ ಹರೆಯದ ಬಾಲಕನೋರ್ವ ಸಹ ಬದುಕುಳಿದಿದ್ದ ಎಂದು ಅವರು ಹೇಳಿದರು.
ಘಟನೆ ನಡೆದಾಗ 21ರ ಹರೆಯದ ಬಿಲ್ಕಿಸ್ ಬಾನು ಐದು ತಿಂಗಳ ಗರ್ಭಿಣಿಯಾಗಿದ್ದರು. ಅವರ ಮೂರರ ಹರೆಯದ ಪುತ್ರಿ ಮತ್ತು ಕುಟುಂಬದ ಇತರ ಆರು ಸದಸ್ಯರು ಕೊಲ್ಲಲ್ಪಟ್ಟಿದ್ದರು.
‘ಅವರನ್ನು ಬಿಡುಗಡೆಗೊಳಿಸಿದಾಗ ನನಗೆ ತುಂಬ ನೋವಾಗಿತ್ತು. ಅವರನ್ನು ಮತ್ತೆ ಕಂಬಿಗಳ ಹಿಂದೆ ಕಳುಹಿಸುತ್ತಿರುವುದು ನನಗೆ ಕೊಂಚ ಸಮಾಧಾನವನ್ನು ನೀಡಿದೆ. ಅಂದು ನನ್ನ ಕಣ್ಣೆದುರೇ ಕೊಲ್ಲಲ್ಪಟ್ಟ 14 ಜನರಲ್ಲಿ ನನ್ನ ತಾಯಿ ಮತ್ತು ಹಿರಿಯ ಸೋದರಿ ಸೇರಿದ್ದರು’ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಪ್ರತ್ಯಕ್ಷದರ್ಶಿ, ಎಲ್ಲ ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಇಲ್ಲವೇ ಜೀವಮಾನವಿಡೀ ಜೈಲಿನಲ್ಲಿ ಕೂಡಿ ಹಾಕಬೇಕು. ಆಗ ಮಾತ್ರ ನ್ಯಾಯ ದೊರೆಯುತ್ತದೆ. ಅವರನ್ನು ಎಂದಿಗೂ ಮತ್ತೆ ಮುಕ್ತಗೊಳಿಸಬಾರದು’ ಎಂದು ಹೇಳಿದ.
ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಬಂಧಿಸುವಲ್ಲಿ ಪ್ರತ್ಯಕ್ಷದರ್ಶಿಯ ಸಾಕ್ಷ್ಯವು ನಿರ್ಣಾಯಕ ಪಾತ್ರ ವಹಿಸಿತ್ತು.