ಮುಂಬೈ| ಆಝಾದ್ ಮೈದಾನ ತೆರವುಗೊಳಿಸುವಂತೆ ಜರಾಂಗೆಗೆ ಪೊಲೀಸರಿಂದ ನೋಟಿಸ್

ಮನೋಜ್ ಜರಾಂಗೆ ಪಾಟೀಲ್ (Photo: PTI)
ಮುಂಬೈ: ಮರಾಠ ಮೀಸಲಾತಿ ಹೋರಾಟಕ್ಕೆ ನೀಡಲಾಗಿದ್ದ ಮಧ್ಯಂತರ ಅನುಮತಿಯ ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂದು ಉಲ್ಲೇಖಿಸಿ, ಇಂದು ಆಝಾದ್ ಮೈದಾನವನ್ನು ತೆರವುಗೊಳಿಸುವಂತೆ ಎಲ್ಲ ಪ್ರತಿಭಟನಾಕಾರರಿಗೂ ಪೊಲೀಸರು ನೋಟಿಸ್ ನೀಡಿದ್ದಾರೆ.
ಮರಾಠ ಮೀಸಲಾತಿ ಹೋರಾಟದಿಂದ ಮುಂಬೈ ನಗರ ಅಕ್ಷರಶಃ ಸ್ತಬ್ಧಗೊಂಡಿರುವುದರಿಂದ, ಇಂದು ಮಧ್ಯಾಹ್ನದೊಳಗೆ ಪ್ರತಿಭಟನಾಕಾರರು ಮುಂಬೈನ ಎಲ್ಲ ಬೀದಿಗಳನ್ನೂ ತೆರವುಗೊಳಿಸಬೇಕು ಎಂದು ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದ ಬೆನ್ನಿಗೇ, ಪೊಲೀಸರು ಈ ನೋಟಿಸ್ ಜಾರಿಗೊಳಿಸಿದ್ದಾರೆ.
ಆದರೆ, ನಾನು ಸತ್ತರೂ ಕೂಡಾ ಇಲ್ಲಿಂದ ತೆರಳುವುದಿಲ್ಲ ಎಂದು ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ್ ಪಟ್ಟು ಹಿಡಿದಿದ್ದಾರೆ. ಅಲ್ಲದೆ, ನಾನು ಮಹಾರಾಷ್ಟ್ರ ಸರಕಾರದೊಂದಿಗೆ ಮಾತುಕತೆ ನಡೆಸಲು ಸಿದ್ಧನಿದ್ದು, ಅವರು ಮರಾಠ ಮೀಸಲಾತಿಯನ್ನು ಒಪ್ಪಿಕೊಳ್ಳುವಂತೆ ಮಾಡುತ್ತೇನೆ ಎಂದು ಜರಾಂಗೆ ಹೇಳಿದ್ದಾರೆ. ಇದರೊಂದಿಗೆ, ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಪ್ರತಿಭಟನಾಕಾರರಿಗೆ ಅವರು ಮನವಿ ಮಾಡಿದ್ದಾರೆ.
ಈ ನಡುವೆ, ಸೋಮವಾರ ನೀರು ಸೇವನೆಯನ್ನು ಸ್ಥಗಿತಗೊಳಿಸಿದ್ದ ಮನೋಜ್ ಜರಾಂಗೆ, ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದಂತೆ ಕಂಡು ಬಂದರು. ಆದರೆ, ಬಾಂಬೆ ಹೈಕೋರ್ಟ್ ನಿರ್ದೇಶನದ ನಂತರ, ಅವರು ಕೆಲವು ಹನಿ ನೀರನ್ನು ಸೇವಿಸಿದರು. ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದ ನ್ಯಾಯಾಲಯ, ಒಂದು ವೇಳೆ ಜರಾಂಗೆಯ ಆರೋಗ್ಯವೇನಾದರೂ ವಿಷಮಿಸಿದರೆ, ಸರಕಾರ ಅವರಿಗೆ ವೈದ್ಯಕೀಯ ನೆರವನ್ನು ಒದಗಿಸಬೇಕು ಎಂದೂ ಸೂಚನೆ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ಮರಾಠ ಮೀಸಲಾತಿ ಹೋರಾಟದ ಕುರಿತು ಹೈಕೋರ್ಟ್ ನೀಡಿರುವ ನಿರ್ದೇಶನಗಳನ್ನು ನಮ್ಮ ಸರಕಾರ ಜಾರಿಗೊಳಿಸಲಿದೆ ಹಾಗೂ ಈ ಬಿಕ್ಕಟ್ಟನ್ನು ಪರಿಹರಿಸಲು ಮಹಾಯುತಿ ಸರಕಾರ ಕಾನೂನು ಅಭಿಪ್ರಾಯವನ್ನು ಪಡೆಯಲು ಮಾತುಕತೆ ಆರಂಭಿಸಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಕೃಷಿಕ ಸಮುದಾಯವಾದ ಕುಣಬಿಯನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ, ಅವರಿಗೆ ಇತರೆ ಹಿಂದುಳಿದ ವರ್ಗಗಳ ಜಾತಿ ಪ್ರಮಾಣ ಪತ್ರವನ್ನು ವಿತರಿಸಬೇಕು ಎಂದು ಆಗ್ರಹಿಸಿ, ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪ್ರತಿಭಟನೆ ನಡೆಸುತ್ತಿದ್ದಾರೆ.







