ಮಹಾರಾಷ್ಟ್ರದ ಪ್ರತಿ ಪ್ರಜೆಯ ತಲೆ ಮೇಲೆ 72,761 ರೂ. ಸಾಲದ ಹೊರೆ!
ರಾಜ್ಯದ ಸಾಲ 9.32 ಲಕ್ಷ ಕೋಟಿ ರೂ.ಗೆ ಏರಿಕೆ: ವರದಿ

ಸಾಂದರ್ಭಿಕ ಚಿತ್ರ (PTI)
ಮುಂಬೈ: ಮಹಾರಾಷ್ಟ್ರದ ಆರ್ಥಿಕ ಹೊರೆ ಕಳವಳಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಸಾಗುತ್ತಿದ್ದು, 2025-26ನೇ ಹಣಕಾಸು ವರ್ಷದ ವೇಳೆಗೆ ರಾಜ್ಯದ ಒಟ್ಟಾರೆ ಸಾಲದ ಪ್ರಮಾಣ 9.32 ಲಕ್ಷ ಕೋಟಿ ರೂ. ತಲುಪಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ, ಮಹಾರಾಷ್ಟ್ರದ ಅಂದಾಜು 12.8 ಕೋಟಿ ಪ್ರಜೆಗಳ ತಲೆ ಮೇಲೆ ತಲಾ 72,761 ರೂ. ಸಾಲದ ಹೊರೆ ಬಿದ್ದಿದೆ.
ರಾಜ್ಯದ ಬಜೆಟ್ ಗಳನ್ನು ವಿಶ್ಲೇಷಿಸುವ ಸ್ವತಂತ್ರ ಸಂಸ್ಥೆಯಾದ ‘ಸಮರ್ಥನ್’ ಸರಕಾರೇತರ ಸಂಸ್ಥೆ ವರದಿಯ ಪ್ರಕಾರ, ಕಳೆದ ವರ್ಷ ಮಹಾರಾಷ್ಟ್ರದ ಒಟ್ಟಾರೆ ಸಾಲದ ಪ್ರಮಾಣ 1.02 ಲಕ್ಷ ಕೋಟಿ ಏರಿಕೆಯಾಗಿದ್ದು, ಮುಂಬರುವ ಹಣಕಾಸು ವರ್ಷದಲ್ಲಿ ಮತ್ತೆ 92,967 ಕೋಟಿ ರೂ. ಸಾಲ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹಣಕಾಸು ಸಚಿವರೂ ಆದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮಂಡಿಸಿರುವ ಬಜೆಟ್, ಹಣಕಾಸು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲ ರಾಜ್ಯದ ಸಾಮರ್ಥ್ಯದ ಬಗ್ಗೆ ಅನುಮಾನಗಳನ್ನು ಮೂಡಿಸಿದೆ.
ಸದ್ಯ, ಮಹಾರಾಷ್ಟ್ರದ ಒಟ್ಟಾರೆ ಸಾಲ ಪ್ರಮಾಣ 7.82 ಲಕ್ಷ ಕೋಟಿ ರೂ. ಆಗಿದೆ. 2024-25ನೇ ಹಣಕಾಸು ಸಾಲಿನಲ್ಲಿ ಅಂದಾಜಿಸಲಾಗಿದ್ದ ಆದಾಯ ಪ್ರಮಾಣ 5.36 ಲಕ್ಷ ಕೋಟಿ ರೂ. ಆಗಿದ್ದರೆ, 2025-26ನೇ ಹಣಕಾಸು ಸಾಲಿನಲ್ಲಿ ಈ ಪ್ರಮಾಣ 5.61 ಲಕ್ಷ ಕೋಟಿ ರೂ.ನಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ಹೀಗಿದ್ದೂ, ಬೆಳೆಯುತ್ತಿರುವ ಸಾಲ ಪ್ರಮಾಣದಿಂದ ಭವಿಷ್ಯದ ಅಭಿವೃದ್ಧಿ ವೆಚ್ಚಗಳ ಮೇಲೆ ತೀವ್ರ ದುಷ್ಪರಿಣಾಮವುಂಟಾಗಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.
Hindustan Times ವರದಿಯ ಪ್ರಕಾರ, ಮಹಾರಾಷ್ಟ್ರದ ಸಾಲ ಪ್ರಮಾಣವು ಕೇವಲ ಎಂಟು ವರ್ಷಗಳಲ್ಲೇ ದುಪ್ಪಟ್ಟಾಗಿದೆ ಎಂಬುದರತ್ತ ಸಮರ್ಥನ್ ನ ಸದಸ್ಯರಲ್ಲೊಬ್ಬರಾದ ರೂಪೇಶ್ ಕೀರ್ ಬೊಟ್ಟು ಮಾಡಿದ್ದಾರೆ. “2017-18ನೇ ಹಣಕಾಸು ಸಾಲಿನಲ್ಲಿ ಮಹಾರಾಷ್ಟ್ರದ ಸಾಲದ ಪ್ರಮಾಣ 4.02 ಲಕ್ಷ ಕೋಟಿ ರೂ.ನಷ್ಟಿತ್ತು. ಆದರೆ, 2024-25ನೇ ಹಣಕಾಸು ಸಾಲಿನ ಹೊತ್ತಿಗೆ ಈ ಪ್ರಮಾಣ 8.39 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಈ ತೀಕ್ಷ್ಣ ಏರಿಕೆಯಿಂದಾಗಿ, ಮಹಾರಾಷ್ಟ್ರದ ಪ್ರತಿ ಪ್ರಜೆಯು ಸದ್ಯ 72,761 ರೂ. ಸಾಲದ ಹೊರೆಯನ್ನು ಹೊತ್ತಿದ್ದಾನೆ ಎಂಬುದು ಇದರ ಅರ್ಥವಾಗಿದೆ” ಎಂದು ಅವರು ಹೇಳಿದ್ದಾರೆ.
ಬಡ್ಡಿ ಪಾವತಿ ಪ್ರಮಾಣದಲ್ಲಿನ ತೀವ್ರ ಸ್ವರೂಪದ ಏರಿಕೆಯು ಬಜೆಟ್ ನಲ್ಲಿ ಕಂಡು ಬಂದಿರುವ ಪ್ರಮುಖ ಕಳವಳಕಾರಿ ಅಂಶವಾಗಿದೆ. ಮಹಾರಾಷ್ಟ್ರ ಕಳೆದ ವರ್ಷ ಪಾವತಿಸಿದ್ದ 54,687 ಕೋಟಿ ರೂ. ಬಡ್ಡಿಗೆ ಹೋಲಿಸಿದರೆ, ಈ ವರ್ಷವೊಂದರಲ್ಲೇ 64,659 ಕೋಟಿ ರೂ. ಬಡ್ಡಿಯನ್ನು ಪಾವತಿಸಲಿದೆ. ರಾಜ್ಯದ ಒಟ್ಟಾರೆ ಆದಾಯ ಸ್ವೀಕೃತಿಯ ಪೈಕಿ ಬಡ್ಡಿ ಪಾವತಿಯ ಪ್ರಮಾಣವೇ ಶೇ. 11.53ರಷ್ಟಿದ್ದು, ಮೂಲಸೌಕರ್ಯ ಹಾಗೂ ಕಲ್ಯಾಣ ಯೋಜನೆಗಳಿಗೆ ಅಲ್ಪ ಪ್ರಮಾಣದ ನಿಧಿ ಮಾತ್ರ ಉಳಿಯುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕಳಪೆ ಹಣಕಾಸು ನಿರ್ವಹಣೆಗಾಗಿ ಸರಕಾರದ ವಿರುದ್ಧ ವಿಪಕ್ಷಗಳ ದಾಳಿ
ಸಾರ್ವಜನಿಕ ಹಣಕಾಸು ವ್ಯವಸ್ಥೆಯನ್ನು ಸರಕಾರ ನಿರ್ವಹಿಸುತ್ತಿರುವ ರೀತಿಯನ್ನು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ. “ಮಹಾರಾಷ್ಟ್ರವು ಕೇವಲ ಬಡ್ಡಿ ಪಾವತಿಗಾಗಿ ವಾರ್ಷಿಕ 65,000 ಕೋಟಿ ರೂ. ಅನ್ನು ವೆಚ್ಚ ಮಾಡುತ್ತಿದೆ. ಇದರಿಂದ ಸರಕಾರದ ತಪ್ಪು ಹಣಕಾಸು ನಿರ್ವಹಣೆ ದೃಢಪಟ್ಟಿದ್ದು, ಇದರಿಂದಾಗಿ ಸಾರ್ವಜನಿಕರು ಅಂತಿಮವಾಗಿ ಹೊರೆಯನ್ನು ಹೊರಬೇಕಾಗಿ ಬಂದಿದೆ” ಎಂದು ಮಹಾರಾಷ್ಟ್ರ ವಿಧಾನ ಪರಿಷತ್ ನಲ್ಲಿ ನಡೆದ ಬಜೆಟ್ ಚರ್ಚೆಯ ವೇಳೆ ವಿಪಕ್ಷಗಳ ನಾಯಕ ಅಂಬಾದಾಸ್ ದಾನವೆ ಸರಕಾರದ ವಿರುದ್ಧ ಚಾಟಿ ಬೀಸಿದರು.
ಮಹಾರಾಷ್ಟ್ರದ ಸಾಲ ಪ್ರಮಾಣವು ಏರುತ್ತಲೇ ಸಾಗಿರುವುದರಿಂದ, ಸರಕಾರವು ಈ ಬೆಳೆಯುತ್ತಿರುವ ಆರ್ಥಿಕ ಸವಾಲನ್ನು ಹೇಗೆ ನಿಭಾಯಿಸಲಿದೆ ಹಾಗೂ ಇದರಿಂದ ಸಾಮಾನ್ಯ ಪ್ರಜೆಯ ಮೇಲೆ ಯಾವ ಬಗೆಯ ಪರಿಣಾಮ ಉಂಟಾಗಲಿದೆ ಎಂಬ ಪ್ರಶ್ನೆಗಳು ಇನ್ನೂ ಮುಂದುವರಿದಿವೆ.