"ಪ್ರತಿಯೊಬ್ಬರ ವಾಟ್ಸ್ಆ್ಯಪ್ ಗುಂಪುಗಳ ಮೇಲೆ ಕಣ್ಗಾವಲು ಇರಿಸಲಾಗಿದೆ": ವಿವಾದ ಸೃಷ್ಟಿಸಿದ ಮಹಾರಾಷ್ಟ್ರ ಬಿಜೆಪಿ ಸಚಿವನ ಹೇಳಿಕೆ

ಚಂದ್ರಶೇಖರ್ ಬವಾಂಕುಲೆ | Photo Credit : PTI
ನಾಗ್ಪುರ : ಪ್ರತಿಯೊಬ್ಬರ ಮೊಬೈಲ್ ಫೋನ್ಗಳು ಮತ್ತುವಾಟ್ಸ್ಆ್ಯಪ್ ಗುಂಪುಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರಿಗೆ ಮಹಾರಾಷ್ಟ್ರದ ಕಂದಾಯ ಸಚಿವ, ಬಿಜೆಪಿ ನಾಯಕ ಚಂದ್ರಶೇಖರ್ ಬವಾಂಕುಲೆ ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ.
ಭಂಡಾರ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಬವಾಂಕುಲೆ, ಪ್ರತಿಯೊಬ್ಬರ ವಾಟ್ಸಾಪ್ ಗ್ರೂಪ್ಗಳ ಮೇಲೆ ಕಣ್ಗಾವಲು ಇರಿಸಲಾಗಿದೆ. ನೀವು ಮಾತನಾಡುವ ಪ್ರತಿಯೊಂದು ಪದವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಬಾರದು ಅಥವಾ ಯಾವುದೇ ರೀತಿಯ ದಂಗೆಯಲ್ಲಿ ತೊಡಗಬಾರದು ಎಂದು ಹೇಳಿದರು.
ಬಿಜೆಪಿ ನಾಯಕನ ಹೇಳಿಕೆಯನ್ನು ಗೌಪ್ಯತೆ ಮತ್ತು ಕಾನೂನಿನ ಉಲ್ಲಂಘನೆ ಎಂದು ಉದ್ಧವ್ ನೇತೃತ್ವದ ಶಿವಸೇನಾ(ಯುಬಿಟಿ) ಸಂಸದ ಸಂಜಯ್ ರಾವತ್ ಬಣ್ಣಿಸಿದ್ದಾರೆ. ಸಚಿವ ಚಂದ್ರಶೇಖರ್ ಬವಾಂಕುಲೆಯನ್ನು ಭಾರತೀಯ ಟೆಲಿಗ್ರಾಫ್ ಕಾಯ್ದೆಯಡಿ ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.
ಬಿಜೆಪಿ ತನ್ನ ಪಕ್ಷದ ಕಾರ್ಯಕರ್ತರ ಸಾಮಾಜಿಕ ಮಾಧ್ಯಮವನ್ನು ಮೇಲ್ವಿಚಾರಣೆ ಮಾಡಲು ಪೆಗಾಸಸ್ ರೀತಿಯ ಸ್ಪೈವೇರ್ ಬಳಸುತ್ತಿದೆಯೇ? ರಾಜಕೀಯ ವಿರೋಧಿಗಳು ಮತ್ತು ತಮ್ಮದೇ ಪಕ್ಷದ ಕಾರ್ಯಕರ್ತರ ಮೇಲೆ ಕಣ್ಗಾವಲಿಡಲು ಬಿಜೆಪಿಯ ಐಟಿ ಸೆಲ್ ಮತ್ತು ನಾಗ್ಪುರದ ಕೆಲವು ಸಂಸ್ಥೆಗಳು ವಾರ್ ರೂಮ್ ಅನ್ನು ಸ್ಥಾಪಿಸಿದೆಯಾ ಎಂದು ಸಂಜಯ್ ರಾವತ್ ಪ್ರಶ್ನಿಸಿದರು.







