ರಾಜಸ್ಥಾನ | ಬೇಹುಗಾರಿಕೆ ಆರೋಪ: ಕಾಂಗ್ರೆಸ್ ನಾಯಕನ ಮಾಜಿ ಸಹಚರನ ಬಂಧನ
6-7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಆರೋಪಿ

PC : indiatoday.in
ಜೈಪುರ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಪರವಾಗಿ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಮಾಜಿ ಸರಕಾರಿ ಉದ್ಯೋಗಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕರೊಬ್ಬರ ಮಾಜಿ ಆಪ್ತ ಸಹಾಯಕನನ್ನು ಬುಧವಾರ ಬಂಧಿಸಲಾಗಿದೆ.
ಜೈಸ್ಮಲೇರ್ ನ ಸರಕಾರಿ ಇಲಾಖೆಯ ಕಚೇರಿಯೊಂದರಿಂದ ಆರೋಪಿ ಸಾಕುರ್ ಖಾನ್ ಮಂಗಲಿಯಾನನ್ನು ರಾಜಸ್ಥಾನ ಸಿಐಡಿ ಪೊಲೀಸರು ಹಾಗೂ ಇನ್ಮಿತರ ಗುಪ್ತಚರ ವಿಶೇಷ ತಂಡಗಳು ಬಂಧಿಸಿವೆ. ಸಾಕುರ್ ಖಾನ್ ಮಂಗಲಿಯಾ ಜೈಸ್ಮಲೇರ್ ನಿವಾಸಿಯಾಗಿದ್ದು, ಸದ್ಯ ರಾಜ್ಯ ಸರಕಾರದ ಉದ್ಯೋಗ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಸಾಕುರ್ ಖಾನ್ ಮಂಗಲಿಯಾ ಜಿಲ್ಲಾಡಳಿತ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ.
ಆರೋಪಿ ಸಾಕುರ್ ಖಾನ್ ಮಂಗಲಿಯಾ ಸಂಶಯಾಸ್ಪದ ಚಟುವಟಿಕೆಗಳಲ್ಲಿ ಭಾಗಿಯಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಸಾಕುರ್ ಖಾನ್ ಮಂಗಲಿಯಾ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯೊಬ್ಬರೊಂದಿಗೆ ಸಂಪರ್ಕ ಹೊಂದಿದ್ದಾನೆ ಹಾಗೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನೊಂದಿಗೂ ಸಂಪರ್ಕ ಹೊಂದಿರಬಹದು ಎಂಬ ಬಗ್ಗೆ ಗುಪ್ತಚರ ಮಾಹಿತಿಗಳನ್ನು ಸ್ವೀಕರಿಸಿದ್ದ ಗುಪ್ತಚರ ಸಂಸ್ಥೆಗಳು, ಆತನ ಮೇಲೆ ನಿಗಾ ಇರಿಸಿದ್ದವು.
ಆರೋಪಿ ಸಾಕುರ್ ಖಾನ್ ಮಂಗಲಿಯಾ ಇದಕ್ಕೂ ಮುನ್ನ, ರಾಜ್ಯ ಕಾಂಗ್ರೆಸ್ ಸರಕಾರದ ಮಾಜಿ ಸಚಿವ ಶೇಲ್ ಮುಹಮ್ಮದ್ ಅವರ ಆಪ್ತ ಸಹಾಯಕನಾಗಿ ಕಾರ್ಯನಿರ್ವಹಿಸಿದ್ದ ಎನ್ನಲಾಗಿದೆ. ಶೇಲ್ ಮುಹಮ್ಮದ್ ಹಾಗೂ ಸಾಕುರ್ ಖಾನ್ ಮಂಗಲಿಯಾ ಒಂದೇ ಗ್ರಾಮದ ನಿವಾಸಿಗಳು ಎಂದೂ ಹೇಳಲಾಗಿದೆ.
ಆರೋಪಿ ಸಾಕುರ್ ಖಾನ್ ಮಂಗಲಿಯಾನನ್ನು ಇನ್ನಷ್ಟು ತನಿಖೆಗಾಗಿ ಜೈಪುರದಲ್ಲಿನ ಕೇಂದ್ರ ತನಿಖಾ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.







