ಮಾಜಿ ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ; ಸಂಸತ್ತಿನಲ್ಲಿ ಕೋಲಾಹಲ

Photo credit: PTI
ಹೊಸದಿಲ್ಲಿ: ಲೋಕಸಭೆಯಲ್ಲಿ ಬಜೆಟ್ ಅಧಿವೇಶನವ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಭಾಷಣವನ್ನು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅರ್ಧದಲ್ಲೇ ತಡೆದ ನಂತರ ಕೋಲಾಹಲ ಉಂಟಾಗಿ ಸದನವನ್ನು ಮುಂದೂಡಲಾಯಿತು.
ಭಾಷಣದಲ್ಲಿ ರಾಹುಲ್ ಗಾಂಧಿ ಅಪ್ರಕಟಿತ ಪುಸ್ತಕದ ವಿಚಾರ ಪ್ರಸ್ತಾಪಿಸಿರುವುದು ಗದ್ದಲಕ್ಕೆ ಕಾರಣವಾಯಿತು. ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ ಚೀನಾ- ಡೋಕ್ಲಾಮ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಬರೆದಿರುವ ಪುಸ್ತಕವನ್ನು ಉಲ್ಲೇಖಿಸಲು ಮುಂದಾದರು. ಇದಕ್ಕೆ ತಕ್ಷಣವೇ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು. “ಈ ಪುಸ್ತಕ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ” ಎಂದು ಅವರು ರಾಹುಲ್ ಗಾಂಧಿಯವರ ಭಾಷಣದ ಉಲ್ಲೇಖಕ್ಕೆ ತಡೆಯೊಡ್ಡಿದರು. ಆಗ ಮಧ್ಯಪ್ರವೇಶಿಸಿದ ಲೋಕಸಭಾಧ್ಯಕ್ಷ ಓಂ ಬಿರ್ಲಾ, “ಪ್ರಕಟವಾಗದ ಪುಸ್ತಕದ ವಿಷಯವನ್ನು ಸಂಸತ್ತಿನಲ್ಲಿ ಉಲ್ಲೇಖಿಸುವುದು ನಿಯಮಬಾಹಿರ” ಎಂದು ರಾಹುಲ್ ಅವರ ಮಾತನ್ನು ನಿಲ್ಲಿಸಿದರು.
ಸರ್ಕಾರದ ಪರ ಸಚಿವರು ಮತ್ತು ಸಂಸದರು ರಾಹುಲ್ ಗಾಂಧಿ ಉಲ್ಲೇಖಕ್ಕೆ ವಿರೋಧ ವ್ಯಕ್ತಪಡಿಸಿದ ನಂತರ ಸಂಸತ್ತಿನ ನಿಯಮಗಳನ್ನು ಮುಂದಿಟ್ಟು ವಿಷಯವನ್ನು ಬದಲಿಸುವಂತೆ ಸೂಚಿಸಲಾಯಿತು. ಆದರೆ ಅವರು ವಿಷಯ ಬದಲಿಸಲು ಒಪ್ಪಲಿಲ್ಲ. ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ಕಳವಳವನ್ನು ಸೂಚಿಸುವ ಲೇಖನವನ್ನು ತಾನು ಉಲ್ಲೇಖಿಸಿರುವುದಾಗಿ ರಾಹುಲ್ ಗಾಂಧಿ ಹೇಳಿದರು. ಆದರೆ ಗೃಹ ಸಚಿವ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರು ರಾಹುಲ್ ಗಾಂಧಿ ರಾಷ್ಟ್ರಪತಿಯ ಭಾಷಣಕ್ಕೆ ಸಂಬಂಧಿಸಿದ ವಿಷಯಗಳಿಗೆ ಪ್ರತಿಕ್ರಿಯಿಸಬೇಕೇ ವಿನಾ ಬೇರೆ ವಿಷಯವನ್ನು ಸದನದಲ್ಲಿ ಉಲ್ಲೇಖಿಸುವಂತಿಲ್ಲ ಎಂದು ಪಟ್ಟು ಹಿಡಿದರು.
ಅಪ್ರಕಟಿತ ಪುಸ್ತಕದ ಕುರಿತು ಸದನದಲ್ಲಿ ಗದ್ದಲಕ್ಕೆ ಮೂಲತಃ ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ ಕಾರಣರಾದರು. ಲೋಕಸಭೆಯಲ್ಲಿ ಚರ್ಚೆಯ ಸಮಯದಲ್ಲಿ ತೇಜಸ್ವಿ ಸೂರ್ಯ ಮೊದಲಿಗೆ ವಿಷಯಾಂತರ ಮಾಡಿದ್ದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ರವಿವಾರದ ಭಾಷಣವನ್ನು ಟೀಕಿಸಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ಅವರು ಮಾತನಾಡಿದಾಗ ಬಜೆಟ್ ಕುರಿತ ಚರ್ಚೆ ಹಾದಿ ತಪ್ಪಿತ್ತು.
ಕಾಂಗ್ರೆಸ್ ನ ಚುನಾವಣಾ ಸೋಲುಗಳನ್ನು ಉಲ್ಲೇಖಿಸಿದ ತೇಜಸ್ವಿ ಸೂರ್ಯ, ಆರ್ಥಿಕ ವಿಷಯದಲ್ಲಿ ಸರ್ಕಾರದ ನಿರ್ಧಾರಗಳನ್ನು ಪಶ್ನಿಸಲು ಕಾಂಗ್ರೆಸ್ಗೆ ಯಾವುದೇ ವಿಶ್ವಾಸಾರ್ಹತೆ ಇಲ್ಲ ಎಂದು ವಾದಿಸಿದರು. ಕಾಂಗ್ರೆಸ್ ‘ದೇಶಭಕ್ತಿ ಹೊಂದಿಲ್ಲ’ ಎಂಬ ಬಿಜೆಪಿಯ ಆರೋಪಗಳನ್ನು ಎದುರಿಸಲು ಪ್ರಯತ್ನಿಸುವಾಗ ರಾಹುಲ್ ಗಾಂಧಿ ಇನ್ನೂ ಪ್ರಕಟವಾಗಬೇಕಿದ್ದ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕಕ್ಕೆ ಸಂಬಂಧಿಸಿದ ದಾಖಲೆಯನ್ನು ಹೊರತೆಗೆದರು. ಇದು ಸಂಪೂರ್ಣವಾಗಿ ಸದನ ವಿಷಯಾಂತರಗೊಂಡಿತು.
ಭಾರತದ ಭೂಪ್ರದೇಶವಾದ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ 2020ರ ಭಾರತ-ಚೀನಾ ಸೇನಾ ಘರ್ಷಣೆಯ ಬಗ್ಗೆ ಹಿಂದೆಂದೂ ತಿಳಿದಿರದ ವಿವರಗಳನ್ನು ಪುಸ್ತಕ ಒಳಗೊಂಡಿರುವ ಕಾರಣದಿಂದ ಕೇಂದ್ರ ಸರ್ಕಾರ ಪುಸ್ತಕವನ್ನು ಪ್ರಕಟಿಸಲು ಅನುಮತಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಹೀಗೆ ರಾಹುಲ್ ಗಾಂಧಿ ಅಪ್ರಕಟಿತ ಪುಸ್ತಕದ ಆಧಾರದಲ್ಲಿ ಮಾತನಾಡಿದ ತಕ್ಷಣ ಗೃಹಸಚಿವ ಅಮಿತ್ ಶಾ ಮತ್ತು ಲೋಕಸಭಾ ಸಭಾಧ್ಯಕ್ಷ ಓಂ ಬಿರ್ಲಾ ಆಕ್ಷೇಪ ವ್ಯಕ್ತಪಡಿಸಿದರು.
ಆದರೆ ರಾಹುಲ್ ಗಾಂಧಿ ಇತ್ತೀಚೆಗೆ ಪ್ರಕಟವಾದ ಲೇಖನವೊಂದರಲ್ಲಿ ಉಲ್ಲೇಖಿಸಿದ ಪ್ರಶ್ನಾರ್ಹ ಆತ್ಮಚರಿತ್ರೆಯ ಆಯ್ದ ಭಾಗವನ್ನು ಓದುತ್ತಿರುವುದಾಗಿ ಹೇಳಿದರು. “ಡೋಕ್ಲಾಮ್ನಲ್ಲಿ ಚೀನೀ ಟ್ಯಾಂಕ್ಗಳು” ಎಂಬ ಪದಗುಚ್ಛದ ಉಲ್ಲೇಖವು ಬಲವಾದ ಪ್ರತಿವಾದಗಳನ್ನು ಹುಟ್ಟು ಹಾಕಿತು. ಈ ವೇಳೆ ಸದನದಲ್ಲಿ ಪ್ರಧಾನಿ ಮೋದಿ ಉಪಸ್ಥಿತರಿದ್ದರು.
ಪ್ರಕಟಗೊಳ್ಳದ ಪುಸ್ತಕದ ಆಯ್ದ ಭಾಗಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಉಲ್ಲೇಖಿಸಬಹುದೇ ಎಂಬ ಬಗ್ಗೆ ಪ್ರತ್ಯಾರೋಪಗಳು ಪ್ರಾರಂಭವಾಗುತ್ತಿದ್ದಂತೆ ಬಿರ್ಲಾ, “ಅದು ಪ್ರಕಟವಾದರೂ ಸಹ ಸದನದ ಕಲಾಪಗಳಿಗೆ ಸಂಬಂಧವಿಲ್ಲದ ಯಾವುದೇ ಪುಸ್ತಕದಿಂದ ಉಲ್ಲೇಖಿಸಲು ಅವಕಾಶವಿಲ್ಲ” ಎಂದು ಹೇಳಿದರು.
ರಾಷ್ಟ್ರಪತಿಯವರ ಭಾಷಣಕ್ಕೆ ಸಂಬಂಧಿಸದ ವಿಷಯಗಳ ಬಗ್ಗೆ ಮಾತನಾಡಬಾರದು ಎಂದು ಸ್ಪೀಕರ್ ಬಿರ್ಲಾ ಹೇಳಿದರು. ಆದರೆ ರಾಹುಲ್ ತಮ್ಮ ಭಾಷಣವನ್ನು ಮುಂದುವರಿಸಿದರು. “ಜನರಲ್ ನರವಾಣೆ ಅವರ ಪುಸ್ತಕವು ಪ್ರಧಾನಿ ಮೋದಿ ಮತ್ತು ರಾಜ್ನಾಥ್ ಸಿಂಗ್ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತದೆ. ನೀವು ಅದನ್ನು ನಾನು ಪ್ರಸ್ತಾಪಿಸಲು ಬಿಡಬೇಕು. ಇದು ಚೀನಾದ ಬಗ್ಗೆ ಅಲ್ಲ, ಇದು ಪ್ರಧಾನಿ ಬಗ್ಗೆ” ಎಂದು ರಾಹುಲ್ ಹೇಳಿದರು. ಅವರ ವಾಕ್ಯವನ್ನು ಅರ್ಧಕ್ಕೆ ಕತ್ತರಿಸಲಾಯಿತು.







