ಕೇರಳ | ಮಾಜಿ ಡಿಜಿಪಿ ಜಾಕೋಬ್ ಥಾಮಸ್ ಆರೆಸ್ಸೆಸ್ಗೆ ಸೇರ್ಪಡೆ

Photo : X/@KPNarayanan1
ಕೊಚ್ಚಿ: ಕೇರಳದ ಮಾಜಿ ಡಿಜಿಪಿ ಜಾಕೋಬ್ ಥಾಮಸ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ದಲ್ಲಿ ಪೂರ್ಣಾವಧಿ ಪ್ರಚಾರಕರಾಗಿ ಸೇರ್ಪಡೆಯಾಗಿದ್ದಾರೆ. ಆರೆಸ್ಸೆಸ್ ಅನ್ನು ʼಒಗ್ಗೂಡಿಸುವ ಶಕ್ತಿʼ ಎಂದು ಕರೆದಿದ್ದಾರೆ.
ಕೊಚ್ಚಿಯ ಪಲ್ಲಿಕ್ಕರದಲ್ಲಿ ನಡೆದ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಸಮವಸ್ತ್ರ ಧರಿಸಿ ಜಾಕೋಬ್ ಥಾಮಸ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಜಾಕೋಬ್ ಥಾಮಸ್, "ಸಾಂಸ್ಕೃತಿಕ ಶಕ್ತಿ ಹೊಂದಿರುವ ವ್ಯಕ್ತಿಗಳನ್ನು ಸೃಷ್ಟಿಸುವುದು ಸಂಘದ ಗುರಿಯಾಗಿದೆ. ನಮ್ಮಲ್ಲಿ ಅಂತಹ ಹೆಚ್ಚಿನ ವ್ಯಕ್ತಿಗಳು ಇದ್ದರೆ, ಸಮಾಜವು ಬಲಗೊಳ್ಳುತ್ತದೆ ಮತ್ತು ರಾಷ್ಟ್ರದ ಬಲವರ್ಧನೆಗೆ ಕಾರಣವಾಗುತ್ತದೆ. ಆದ್ದರಿಂದ, ಆರೆಸ್ಸೆಸ್ ವ್ಯಕ್ತಿಗಳ ಮೂಲಕ ಬಲವಾದ ರಾಷ್ಟ್ರವನ್ನು ನಿರ್ಮಿಸಲು ಉದ್ದೇಶಿಸಿದೆ" ಎಂದು ಹೇಳಿದ್ದಾರೆ.
ಆರೆಸ್ಸೆಸ್ಗೆ ಜಾತಿ, ಧರ್ಮ, ಭಾಷೆ ಅಥವಾ ಪ್ರಾದೇಶಿಕ ಗುಂಪುಗಾರಿಕೆ ಇಲ್ಲ. ಆರೆಸ್ಸೆಸ್ ಒಂದು ಧಾರ್ಮಿಕ ಸಂಘಟನೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಜಾಕೋಬ್ ಥಾಮಸ್, ನಾನು ಸೇಂಟ್ ಮೇರಿ ಶಾಲೆಯಲ್ಲಿ ಮತ್ತು ನಂತರ ಸೇಂಟ್ ಜಾರ್ಜ್ ಕಾಲೇಜಿನಲ್ಲಿ ಓದಿದ್ದೇನೆ. ನಾನು ಕ್ರೈಸ್ತ ಧರ್ಮವನ್ನು ಅನುಸರಿಸುತ್ತೇನೆ. ಆರೆಸ್ಸೆಸ್ನ ಶತಮಾನೋತ್ಸವದಂದು ಆರೆಸ್ಸೆಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದೇನೆ ಎಂದು ಹೇಳಿದ್ದಾರೆ.
ಕೇರಳದ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಮಾಜಿ ನಿರ್ದೇಶಕರಾಗಿರುವ ಜಾಕೋಬ್ ಥಾಮಸ್ 2021ರಲ್ಲಿ ಬಿಜೆಪಿ ಸೇರಿದ್ದರು ಮತ್ತು ಇತ್ತೀಚೆಗೆ ಆರೆಸ್ಸೆಸ್ಗೆ ಸೇರುವುದಾಗಿ ಘೋಷಿಸಿದ್ದರು.







