"ಎಸ್ಐಟಿ ತನಿಖೆಯಿಂದ ಸತ್ಯ ಹೊರ ಬರಲಿದೆ": ಪುತ್ರನ ಸಾವಿನಲ್ಲಿ ತನ್ನ ಪಾತ್ರ ನಿರಾಕರಿಸಿದ ಪಂಜಾಬ್ ನ ಮಾಜಿ ಡಿಜಿಪಿ

ಮುಹಮ್ಮದ್ ಮುಸ್ತಫಾ (Photo: ITG)
ಸಹರಣ್ ಪುರ್: ಪುತ್ರನ ಸಾವಿಗೆ ಸಂಬಂಧಿಸಿದಂತೆ ತನ್ನ ವಿರುದ್ಧದ ಎಲ್ಲ ಆರೋಪಗಳನ್ನೂ ಪಂಜಾಬ್ ನ ಮಾಜಿ ಪೊಲೀಸ್ ಮಹಾ ನಿರ್ದೇಶಕ ಮುಹಮ್ಮದ್ ಮುಸ್ತಫಾ ತಳ್ಳಿ ಹಾಕಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ನನ್ನ ಹಾಗೂ ನನ್ನ ಪತ್ನಿ ರಝಿಯಾ ಸುಲ್ತಾನ ವಿರುದ್ಧ ದಾಖಲಾಗಿರುವ ದೂರನ್ನು ನಾನು ಸ್ವಾಗತಿಸುತ್ತೇನೆ. ತನಿಖೆಯಲ್ಲಿ ಸತ್ಯ ಬಯಲಿಗೆ ಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 16ರಂದು ಪಂಚಕುಲದಲ್ಲಿನ ತಮ್ಮ ನಿವಾಸದೆದುರು ನಿಗೂಢವಾಗಿ ಮೃತಪಟ್ಟಿದ್ದ ತಮ್ಮ 35 ವರ್ಷದ ಪುತ್ರ ಅಕಿಲ್ ಅಖ್ತರ್ ಪ್ರಕರಣಕ್ಕೆ ಸಂಬಂಧಿಸಿದಂತೆ 1985ರ ಬ್ಯಾಚ್ ನ ನಿವೃತ್ತ ಐಪಿಎಸ್ ಅಧಿಕಾರಿ ಮುಹಮ್ಮದ್ ಮುಸ್ತಫಾ ಹಾಗೂ ಪಂಜಾಬ್ ನ ಮಾಜಿ ಸಚಿವೆಯಾದ ಅವರ ಪತ್ನಿ ರಝಿಯಾ ಸುಲ್ತಾನ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದರೊಂದಿಗೆ, ಅಕಿಲ್ ಅಖ್ತರ್ ಪತ್ನಿ ಹಾಗೂ ಸಹೋದರಿಯ ವಿರುದ್ಧವೂ ಪ್ರಕರಣ ದಾಖಲಾಗಿತ್ತು.
ಮಿತಿಮೀರಿದ ಔಷಧ ಸೇವನೆಯಿಂದಾಗಿ ಅಕಿಲ್ ಅಖ್ತರ್ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ತಿಳಿಸಿತ್ತು. ಇದಾದ ನಂತರ ಅವರ ಪೂರ್ವಜರ ಗ್ರಾಮವಾದ ಹರ್ದಾ ಖೇರಿಯಲ್ಲಿ ಅಕಿಲ್ ಅಖ್ತರ್ ಅಂತ್ಯಕ್ರಿಯೆ ನಡೆಸಲಾಗಿತ್ತು.
ಅಕಿಲ್ ಅಖ್ತರ್ ಮೃತಪಡುವುದಕ್ಕೂ ಮುನ್ನ, ತಮ್ಮ ಹಾಗೂ ಇನ್ನಿತರ ಕುಟುಂಬದ ಸದಸ್ಯರ ವಿರುದ್ಧ ಮಾಡಿರುವ ಗಂಭೀರ ಆರೋಪಗಳ ವಿಡಿಯೊ ಕುರಿತು ಪ್ರತಿಕ್ರಿಯಿಸಿದ ಮುಹಮ್ಮದ್ ಮುಸ್ತಫಾ, “ನಮ್ಮ ಪುತ್ರ ಸುಮಾರು 18 ವರ್ಷಗಳಿಂದ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದ. ಆತ ಮಾದಕ ದ್ರವ್ಯ ವ್ಯಸನಕ್ಕೂ ಗುರಿಯಾಗಿದ್ದ” ಎಂದು ಹೇಳಿದ್ದಾರೆ.
ಮುಹಮ್ಮದ್ ಮುಸ್ತಫಾರ ಈ ಹೇಳಿಕೆಯನ್ನು ಕುಟುಂಬದ ಸದಸ್ಯರೂ ದೃಢಪಡಿಸಿದ್ದಾರೆ.
“ನಾವು ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ವಿಶೇಷ ತನಿಖಾ ತಂಡದ ರಚನೆಗೆ ಸಂಪೂರ್ಣ ಬೆಂಬಲ ಸೂಚಿಸಿದೆವು” ಎಂದು ಅವರು ಹೇಳಿದ್ದಾರೆ.
ಪಂಜಾಬ್ ನ ಮಲೇರ್ ಕೋಟ್ಲಾ ನಿವಾಸಿಯಾದ ಶಂಸುದ್ದೀನ್ ಎಂಬವರು ನೀಡಿದ ದೂರನ್ನು ಆಧರಿಸಿ ಮುಹಮ್ಮದ್ ಮುಸ್ತಫಾ ಹಾಗೂ ಅವರ ಪತ್ನಿ ರಝಿಯಾ ಸುಲ್ತಾನ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಶಂಸುದ್ದೀನ್ ತಮ್ಮ ದೂರಿನಲ್ಲಿ ಮಾಡಿರುವ ಆರೋಪವನ್ನೂ ಮುಹಮ್ಮದ್ ಮುಸ್ತಫಾ ಅಲ್ಲಗಳೆದರು. ನಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.
ನನ್ನ ವರ್ಚಸ್ಸಿಗೆ ಧಕ್ಕೆ ತರಲು ಕೆಲವು ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ ಎಂದೂ ಅವರು ದೂರಿದ್ದಾರೆ.
ನನ್ನ ಮನವಿಯ ಮೇರೆಗೆ ನನ್ನ ಪುತ್ರನ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬಿಡುಗಡೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಪಂಚಕುಲದಲ್ಲಿನ ತಮ್ಮ ನಿವಾಸದೆದುರು ನಿಗೂಢವಾಗಿ ಮೃತಪಟ್ಟಿದ್ದ ಅಕಿಲ್ ಅಖ್ತರ್, ನಾನು ತುಂಬಾ ಮಾನಸಿಕ ಒತ್ತಡಕ್ಕೊಳಗಾಗಿದ್ದೇನೆ ಎಂದು ವಿಡಿಯೊವೊಂದರಲ್ಲಿ ಆರೋಪಿಸಿದ್ದರು ಹಾಗೂ ತಮ್ಮ ಕುಟುಂಬದ ಸದಸ್ಯರ ವಿರುದ್ಧ ಕೆಲವು ಗಂಭೀರ ಆರೋಪಗಳನ್ನೂ ಮಾಡಿದ್ದರು. ಈ ವಿಡಿಯೊ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮುಹಮ್ಮದ್ ಮುಸ್ತಫಾ ಹಾಗೂ ರಝಿಯಾ ಸುಲ್ತಾನರ ವಿರುದ್ಧ ಪ್ರಕರಣ ದಾಖಲಾಗಿದೆ.







