ತನ್ನ ಪುತ್ರನ ಹತ್ಯೆಯ ಪ್ರತ್ಯಕ್ಷ ಸಾಕ್ಷಿಯಾಗಿದ್ದ ನಿವೃತ್ತ ಶಿಕ್ಷಕನ ಗುಂಡಿಟ್ಟು ಹತ್ಯೆ

ಸಾಂದರ್ಭಿಕ ಚಿತ್ರ
ಬೇಗುಸರಾಯಿ (ಬಿಹಾರ): ಮುಂಜಾನೆಯ ವಾಯುವಿಹಾರಕ್ಕೆ ತೆರಳುತ್ತಿದ್ದ ನಿವೃತ್ತ ಶಿಕ್ಷಕರೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಬಿಹಾರದ ಬೇಗುಸರಾಯಿಯಲ್ಲಿ ನಡೆದಿದೆ ಎಂದು indiatoday.in ವರದಿ ಮಾಡಿದೆ.
ಹತ್ಯೆಗೀಡಾದ ಶಿಕ್ಷಕರನ್ನು ಫತೇಹಾ ಗ್ರಾಮದ ಜವಾಹರ್ ಚೌಧರಿ (70) ಎಂದು ಗುರುತಿಸಲಾಗಿದೆ. ಈ ಘಟನೆಯು ಅವರು ತಮ್ಮ ಗ್ರಾಮದಿಂದ ಫತೇಹಾ ರೈಲ್ವೆ ನಿಲ್ದಾಣದವರೆಗೂ ವಾಯುವಿಹಾರ ನಡೆಸುವಾಗ ಜರುಗಿದೆ. ಅಲ್ಲಿಗೆ ಬೈಕ್ ನಲ್ಲಿ ಬಂದಿರುವ ಮೂವರು ಮುಸುಕುಧಾರಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಫೆಬ್ರವರಿ 2021ರಲ್ಲಿ ನಡೆದಿದ್ದ ತಮ್ಮ ಪುತ್ರನ ಹತ್ಯೆಯ ಪ್ರತ್ಯಕ್ಷ ಸಾಕ್ಷಿಗಳ ಪೈಕಿ ಅವರೂ ಒಬ್ಬರಾಗಿದ್ದರು.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಕ್ಷಿಪ್ರ ತನಿಖೆ ಕೈಗೊಂಡಿದ್ದು, ಈ ಹತ್ಯೆಯು ಭೂವ್ಯಾಜ್ಯದೊಂದಿಗೆ ಸಂಬಂಧ ಹೊಂದಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಶಂಕಿಸಿದ್ದಾರೆ.
ಈ ಘಟನೆಯು ಆರಿಯಾ ಜಿಲ್ಲೆಯ ರಾಣಿಗಂಜ್ ನಲ್ಲಿ ಪತ್ರಕರ್ತರೊಬ್ಬರನ್ನು ಅವರ ನಿವಾಸದಲ್ಲಿ ಗುಂಡಿಟ್ಟು ಹತ್ಯೆಗೈದ ಕೆಲವೇ ದಿನಗಳ ಅಂತರದಲ್ಲಿ ಜರುಗಿದೆ.
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ನಿಲುಗಡೆ ವಿಚಾರವಾಗಿ ನಡೆದ ಜಗಳದಲ್ಲಿ ಮೂವರು ವ್ಯಕ್ತಿಗಳ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಈ ಪೈಕಿ ಓರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಬಚ್ಚಾವರ ಜಿಲ್ಲೆಯಲ್ಲಿ ನಡೆದಿದೆ.







