ನಿನಗೆ ಶಾರೂಖ್ ಖಾನ್ ಗೊತ್ತಾ?: ಕೈಯಲ್ಲಿ ಬಂದೂಕು ಹಿಡಿದುಕೊಂಡು ಅಪಹೃತ ಭಾರತೀಯ ಪ್ರಜೆಯನ್ನು ಪ್ರಶ್ನಿಸಿದ ಸುಡಾನ್ ಬಂಡುಕೋರರು!

PC : NDTV
ಹೊಸ ದಿಲ್ಲಿ/ಡಾರ್ಫುರ್: 2023ರಿಂದ ಸುಡಾನ್ ನ ಸಶಸ್ತ್ರ ಪಡೆಗಳು ಹಾಗೂ ಕ್ಷಿಪ್ರ ನೆರವು ಪಡೆಗಳ ನಡುವಿನ ಹಿಂಸಾತ್ಮಕ ಸಂಘರ್ಷಕ್ಕೆ ಸಾಕ್ಷಿಯಾಗಿರುವ ಸುಡಾನ್ ನಲ್ಲಿ ಕ್ಷಿಪ್ರ ನೆರವು ಪಡೆಯ ಬಂಡುಕೋರರು ಒಡಿಶಾದ ಜಗತ್ ಸಿಂಗ್ ಪುರ್ ಜಿಲ್ಲೆಯವರಾದ ಭಾರತೀಯ ಪ್ರಜೆ ಆದರ್ಶ್ ಬಹೇರಾರನ್ನು ಅಪಹರಿಸಿ, “ನಿನಗೆ ಶಾರೂಖ್ ಖಾನ್ ಗೊತ್ತಾ?” ಎಂದು ಪ್ರಶ್ನಿಸಿರುವ ವಿಚಿತ್ರ ಘಟನೆ ವರದಿಯಾಗಿದೆ.
ಕಳೆದೆರಡು ವರ್ಷಗಳಿಂದ ಸುಡಾನ್ ನಲ್ಲಿ ನಡೆಯುತ್ತಿರುವ ಆಂತರಿಕ ದಂಗೆಯಲ್ಲಿ ಇದುವರೆಗೆ ಸುಮಾರು 13 ದಶಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ.
36 ವರ್ಷದ ಆದರ್ಶ್ ಬಹೇರಾರನ್ನು ಖಾರ್ಟೂಮ್ ನಿಂದ ಸುಮಾರು 1,000 ಕಿಮೀ ದೂರವಿರುವ ಅಲ್ ಫಶೀರ್ ನಗರದಿಂದ ಕ್ಷಿಪ್ರ ನೆರವು ಪಡೆಯ ಬಂಡುಕೋರರು ಅಪಹರಿಸಿದ್ದಾರೆ. ಬಳಿಕ, ಖಾರ್ಟೂಮ್ ನಿಂದ ಸರಿಸುಮಾರು 1,200 ಕಿಮೀ ದೂರವಿರುವ ನೈರುತ್ಯ ಸುಡಾನ್ ನ ದಕ್ಷಿಣ ಡಾರ್ಫುರ್ ನ ನ್ಯಾಲಾ ನಗರಕ್ಕೆ ಕೊಂಡೊಯ್ದಿದ್ದಾರೆ. ಈ ನಗರವನ್ನು ಕ್ಷಿಪ್ರ ನೆರವು ಪಡೆಯ ಭದ್ರಕೋಟೆ ಎಂದೇ ಪರಿಗಣಿಸಲಾಗಿದೆ.
ಈ ಅಪಹರಣದ ವಿಡಿಯೊ ವೈರಲ್ ಆಗಿದ್ದು, ಈ ವಿಡಿಯೊದಲ್ಲಿ ಮತ್ತೋರ್ವ ಬಂಡುಕೋರ ಯೋಧನು, “ಡಗಲೊ ಒಳ್ಳೆಯ ವ್ಯಕ್ತಿ” ಎಂದು ಕ್ಯಾಮೆರಾ ಎದುರು ಹೇಳುವಂತೆ ಆದರ್ಶ್ ಬಹೇರಾಗೆ ಒತ್ತಾಯಿಸುತ್ತಿರುವುದು ಕಂಡು ಬಂದಿದೆ. ಡಗಲೊ ಎಂದರೆ, ಕ್ಷಿಪ್ರ ನೆರವು ಪಡೆಯ ನಾಯಕ ಮುಹಮ್ಮದ್ ಹಮ್ದನ್ ಡಗಲೊ ಅಥವಾ ಹೆಮೆಟಿ ಆಗಿದ್ದು, ಅವರು ಸುಡಾನ್ ಸಶಸ್ತ್ರ ಪಡೆಯ ಪಾಲಿಗೆ ಸಿಂಹಸ್ವಪ್ನರಾಗಿದ್ದಾರೆ.
ಈ ಕುರಿತು ಪ್ರಶ್ನಿಸಲು ಆದರ್ಶ್ ಬಹೇರಾರ ಕುಟುಂಬವನ್ನು NDTV ಸುದ್ದಿ ಸಂಸ್ಥೆ ಸಂಪರ್ಕಿಸಿದ್ದು, 2022ರಿಂದ ಆದರ್ಶ್ ಬಹೇರಾ ಸುಡಾನ್ ನ ಸುಕಾರತಿ ಪ್ಲಾಸ್ಟಿಕ್ ಕಾರ್ಖಾನೆ ಎಂದು ಕರೆಯಲಾಗುವ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಆದರ್ಶ್ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ನಾವು ಕ್ರಮವಾಗಿ ಎಂಟು ಹಾಗೂ ಮೂರು ವರ್ಷದ ಇಬ್ಬರು ಮಕ್ಕಳಿಗೆ ಪೋಷಕರಾಗಿದ್ದೇವೆ ಎಂದು ಆದರ್ಶ್ ಬಹೇರಾರ ಪತ್ನಿ ಸುಶ್ಮಿತಾ ತಿಳಿಸಿದ್ದಾರೆ.
ಆದರ್ಶ್ ಬಹೇರಾರ ಕುಟುಂಬದ ಸದಸ್ಯರು ಹಂಚಿಕೊಂಡಿರುವ ವಿಡಿಯೊದಲ್ಲಿ, ಆದರ್ಶ್ ಬಹೇರಾ ಕೈಜೋಡಿಸಿಕೊಂಡು, “ನಾನು ಪರಿಸ್ಥಿತಿ ತುಂಬಾ ಕೆಟ್ಟದಾಗಿರುವ ಅಲ್ ಫಶರ್ ನಲ್ಲಿದ್ದೇನೆ. ನಾನು ಕಳೆದ ಎರಡು ವರ್ಷಗಳಿಂದ ಇಲ್ಲಿ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದೇನೆ. ನನ್ನ ಕುಟುಂಬ ಹಾಗೂ ಮಕ್ಕಳು ತುಂಬಾ ಚಿಂತಾಕ್ರಾಂತರಾಗಿದ್ದಾರೆ. ನನಗೆ ಸಹಾಯ ಮಾಡಬೇಕೆಂದು ಒಡಿಶಾ ಸರಕಾರದ ಬಳಿ ಮನವಿ ಮಾಡುತ್ತೇನೆ” ಎಂದು ಕೋರುತ್ತಿರುವುದು ಸೆರೆಯಾಗಿದೆ.







