ಯೆಮೆನ್ ನಲ್ಲಿ ನರ್ಸ್ ನಿಮಿಷಾ ಪ್ರಿಯಾ ಮರಣ ದಂಡನೆಯನ್ನು ತಡೆಹಿಡಿಯಲಾಗಿದೆ: ಸುಪ್ರೀಂ ಕೋರ್ಟ್ ಗೆ ತಿಳಿಸಿದ ಕೇಂದ್ರ ಸರಕಾರ

ನಿಮಿಷಾ ಪ್ರಿಯಾ
ಹೊಸದಿಲ್ಲಿ: ಯೆಮೆನ್ ನಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಭವಿಷ್ಯದ ಬಗ್ಗೆ ಅನಿಶ್ಚಿತತೆಯ ನಡುವೆ ಅವರ ಮರಣದಂಡನೆ ಶಿಕ್ಷೆಗೆ ತಡೆಹಿಡಿಯಲಾಗಿದೆ ಮತ್ತು ಈ ವಿಷಯದಲ್ಲಿ ಯಾವುದೇ ವ್ಯತಿರಿಕ್ತ ಬೆಳವಣಿಗೆ ನಡೆದಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದೆ.
ಕೇಂದ್ರ ಸರಕಾರದ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಈ ವಿಷಯದಲ್ಲಿ ನೂತನ ಸಂಧಾನಕಾರರೊಬ್ಬರು ಮಧ್ಯಪ್ರವೇಶಿಸಿದ್ದಾರೆ ಎಂದು ನ್ಯಾ. ವಿಕ್ರಂನಾಥ್ ಹಾಗೂ ನ್ಯಾ. ಸಂದೀಪ್ ಮೆಹ್ತಾರನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಿದರು.
ಅದಕ್ಕೆ ಪ್ರತಿಯಾಗಿ, “ಮರಣ ದಂಡನೆ ವಿಷಯ ಏನಾಯಿತು?” ಎಂದು ನ್ಯಾಯಪೀಠ ಅವರನ್ನು ಪ್ರಶ್ನಿಸಿತು.
ಆಗ, ಮರಣ ದಂಡನೆಯನ್ನು ತಡೆಹಿಡಿಯಲಾಗಿದೆ ಎಂದು ನಿಮಿಷಾ ಪ್ರಿಯಾಗೆ ಕಾನೂನು ನೆರವು ಒದಗಿಸಿರುವ ‘ಸೇವ್ ನಿಮಿಷಾ ಪ್ರಿಯಾ ಇಂಟರ್ ನ್ಯಾಷನಲ್ ಕೌನ್ಸಿಲ್’ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
“ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ನೂತನ ಸಂಧಾನಕಾರರೊಬ್ಬರು ಮಧ್ಯ ಪ್ರವೇಶಿಸಿದ್ದಾರೆ. ಒಂದು ಸಂತೋಷದ ಸಂಗತಿಯೆಂದರೆ, ಈ ವಿಷಯದಲ್ಲಿ ಯಾವುದೇ ವ್ಯತಿರಿಕ್ತ ಬೆಳವಣಿಗೆ ನಡೆದಿಲ್ಲ” ಎಂದು ಆರ್.ವೆಂಕಟರಮಣಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಬಳಿಕ, ಪ್ರಕರಣದ ವಿಚಾರಣೆಯ ಮುಂದೂಡಿಕೆಗೆ ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಅರ್ಜಿದಾರರ ಪರ ವಕೀಲರ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, “2026ರ ಜನವರಿಗೆ ವಿಚಾರಣೆಯನ್ನು ಪಟ್ಟಿ ಮಾಡಲಾಗಿದೆ. ಪರಿಸ್ಥಿತಿಯ ಅಗನುಗುಣವಾಗಿ ವಾದಿಗಳು ಪ್ರಕರಣವನ್ನು ಮುಂಚಿತವಾಗಿ ವಿಚಾರಣೆಗೆ ಪಟ್ಟಿ ಮಾಡುವಂತೆ ನ್ಯಾಯಾಲಯವನ್ನು ಸಂಪರ್ಕಿಸಲು ಮುಕ್ತರಾಗಿದ್ದಾರೆ” ಎಂದು ಹೇಳಿದೆ.







