ಅವಧಿ ಮೀರಿದ ಆಹಾರ ವಸ್ತುಗಳ ಮಾರಾಟ ಜಾಲ ಪತ್ತೆ

ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ, ಡಿ. 18: ಪ್ರತಿಷ್ಠಿತ ಕಂಪೆನಿಗಳ ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ಹಾಗೂ ಕಳಪೆ ಆಹಾರ ಪದಾರ್ಥಗಳನ್ನು ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ಮಾರಾಟ ಮಾಡುವ ಜಾಲವೊಂದನ್ನು ಪೊಲೀಸರು ಬೇಧಿಸಿದ್ದಾರೆ ಹಾಗೂ ಅದರ ಸೂತ್ರಧಾರಿಯನ್ನು ಬಂಧಿಸಿದ್ದಾರೆ.
ದಾಳಿಯ ವೇಳೆ, ಹಲವು ಲಕ್ಷ ರೂಪಾಯಿ ಮೌಲ್ಯದ ಚಾಕೊಲೇಟ್ಗಳು ಸೇರಿದಂತೆ ಭಾರೀ ಪ್ರಮಾಣದ ಆಹಾರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದರು.
ಬಂಧಿತನನ್ನು ಉದ್ಯಮಿ, ತ್ರಿನಗರ ನಿವಾಸಿ ಅತುಲ್ ಜಲನ್ ಎಂಬುದಾಗಿ ಗುರುತಿಸಲಾಗಿದೆ. ಅವನು, ಮುಖ್ಯವಾಗಿ ಮುಂಬೈಯಿಂದ ಅವಧಿ ಮೀರಿದ ಅಥವಾ ಶೀಘ್ರದಲ್ಲೇ ಮೀರಲಿರುವ ಪ್ರಸಿದ್ಧ ಕಂಪೆನಿಗಳ ಆಹಾರ ವಸ್ತುಗಳನ್ನು ಮಧ್ಯವರ್ತಿಗಳ ಮೂಲಕ ಅತ್ಯಂತ ಕಡಿಮೆ ಬೆಲೆಗೆ ಖರೀದಿಸುತ್ತಿದ್ದನು ಎನ್ನಲಾಗಿದೆ.
ಬಳಿಕ, ಅವನು ಆ ಉತ್ಪನ್ನಗಳ ವಾಯಿದೆ ದಿನಾಂಕಗಳು, ತಯಾರಿಕಾ ವಿವರಗಳು, ಗರಿಷ್ಠ ಮಾರಾಟ ಬೆಲೆ ಮತ್ತು ಬ್ಯಾಚ್ ಸಂಖ್ಯೆಗಳನ್ನು ತಿದ್ದುಪಡಿ ಮಾಡಿ ರಿಯಾಯಿತಿ ದರದಲ್ಲಿ ಆನ್ಲೈನ್ ಮತ್ತು ಅಂಗಡಿಗಳ ಮೂಲಕ ಮಾರಾಟ ಮಾಡುತ್ತಿದ್ದನು. ಅವನು ಆಕರ್ಷಕ ಕೊಡುಗೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದ್ದನು.
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರ (ಎಫ್ಎಸ್ಎಸ್ಎಐ) ಸಲ್ಲಿಸಿದ ದೂರಿನ ಆಧಾರದಲ್ಲಿ ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ.
ಪೊಟ್ಟಣಗಳಲ್ಲಿ ತುಂಬಿಸುವ ಮತ್ತು ಹೆಸರುಗಳನ್ನು ಬರೆಯುವ ನಿಯಮಾವಳಿಗಳನ್ನು ಉಲ್ಲಂಘಿಸಿ ಹಲವಾರು ಆಹಾರ ಉತ್ಪನ್ನಗಳನ್ನು ಪ್ರತಿಷ್ಠಿತ ಕಂಪೆನಿಗಳ ಹೆಸರುಗಳನ್ನು ಹೊಂದಿದ ಪೊಟ್ಟಣಗಳಲ್ಲಿ ಮಾರಾಟ ಮಾಡಿರುವುದು ಪ್ರಯೋಗಾಲಯದಲ್ಲಿ ಮಾಡಲಾಗಿರುವ ವಿಶ್ಲೇಷಣೆಯಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.







