Tamil Nadu | ಸೆಂಗೊಟ್ಟೈಯನ್ TVK ಸೇರ್ಪಡೆಯಾಗಿದ್ದರಿಂದ ವಿಜಯ್ ಪಕ್ಷಕ್ಕೇನು ಲಾಭ?

Photo Credit : PTI
ಚೆನ್ನೈ: ಪಕ್ಷವಿರೋಧ ಚಟುವಟಿಕೆಗಳ ಆರೋಪದ ಮೇಲೆ AIADMK ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಮಾಜಿ ಸಚಿವ ಸೆಂಗೊಟ್ಟೈಯನ್ ಗುರುವಾರ ನಟ ವಿಜಯ್ ನಾಯಕತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ ಸೇರ್ಪಡೆಯಾಗಿದ್ದಾರೆ. ಅವರ ಸೇರ್ಪಡೆಯಿಂದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಚುನಾವಣೆಗೂ ಮುನ್ನ ಭಾರಿ ಲಾಭವಾಗಿದೆ ಎಂಬ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
1972ರಲ್ಲಿ AIADMK ಸ್ಥಾಪನೆಗೊಂಡಾಗಿನಿಂದಲೂ ಅದರೊಂದಿಗೆ ಗುರುತಿಸಿಕೊಂಡು ಬಂದಿದ್ದ ಮಾಜಿ ಸಚಿವ ಕೆ.ಎ.ಸೆಂಗೊಟ್ಟೈಯನ್, ಫೆಬ್ರವರಿ ತಿಂಗಳಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ವಿರುದ್ಧ ಬಂಡೆದ್ದಿದ್ದರು. ಇದು ಎಲ್ಲರನ್ನೂ ಚಕಿತಗೊಳಿಸಿತ್ತು.
ಅದಕ್ಕೆ ಕಾರಣವೂ ಇತ್ತು. ಮೃದು ಭಾಷಿಯಾದ 77 ವರ್ಷದ ಹಿರಿಯ ನಾಯಕ ಸೆಂಗೊಟ್ಟೈಯನ್ ಮೂಲತಃ AIADMK ಹಾಗೂ ಅದರ ನಾಯಕತ್ವಕ್ಕೆ ತಮ್ಮ ಅಚಲ ನಿಷ್ಠೆ ಪ್ರದರ್ಶಿಸುವ ಮೂಲಕವೇ ಮನೆಮಾತಾದವರು. ಆದರೆ, AIADMK ಮತ್ತೆ NDA ತೆಕ್ಕೆಗೆ ಮರಳಲು ಹಾಗೂ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ವಿ.ಕೆ.ಶಶಿಕಲಾ, ಟಿ.ಟಿ.ವಿ.ದನಿಕರನ್ ಹಾಗೂ ಒ ಪನೀರ್ ಸೆಲ್ವಂ ಮತ್ತೆ AIADMKಗೆ ಸೇರ್ಪಡೆಯಾಗುವಂತೆ ಪಳನಿಸ್ವಾಮಿ ಮೇಲೆ ಒತ್ತಡ ಹೇರಲು ಸೆಂಗೊಟ್ಟೈಯನ್ ಅವರನ್ನು ಬಿಜೆಪಿ ಬಳಸಿಕೊಂಡಿತ್ತು ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಹರಿದಾಡಿದ್ದವು.
ಹೀಗಿದ್ದೂ, ಒಂದು ಹಂತದಲ್ಲಿ AIADMK ನಾಯಕತ್ವದ ವಿರುದ್ಧವೇ ಬಂಡೆದ್ದ ಸೆಂಗೊಟ್ಟೈಯನ್ ರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಅವರನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡಿದ್ದ ಬಿಜೆಪಿ ಕೂಡಾ, ಅವರನ್ನು ನಡುನೀರಿನಲ್ಲಿ ಕೈಬಿಟ್ಟಿತ್ತು. ಹೀಗಾಗಿ, ಅಂತಿಮವಾಗಿ ಅವರಿಂದು ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸೇರ್ಪಡೆಯಾಗಿದ್ದಾರೆ.
AIADMKಯ ಪ್ರಶ್ನಾತೀತ ನಾಯಕ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದ, ಜಯಲಲಿತಾರಿಗೂ ಆಪ್ತರಾಗಿದ್ದ ಸೆಂಗೊಟ್ಟೈಯನ್, ತಮ್ಮ ಸಂಘಟನಾತ್ಮಕ ಕೌಶಲಗಳಿಗೆ ಹೆಸರಾಗಿದ್ದಾರೆ. ವಿಶೇಷವಾಗಿ ಜಯಲಲಿತಾರ ಚುನಾವಣಾ ಪ್ರಚಾರ ಯೋಜನೆಯ ರೂಪುರೇಷೆ ತಯಾರಿಸುವುದರಲ್ಲಿ ಅವರು ನಿಪುಣರಾಗಿದ್ದರು. ಮೇಲಾಗಿ, ಅವರು ಪಳನಿಸ್ವಾಮಿ ಅವರ ಪ್ರಭಾವಿ ಗೌಂಡರ್ ಸಮುದಾಯಕ್ಕೇ ಸೇರಿದವರಾಗಿದ್ದಾರೆ.
ಇದೀಗ ಗೌಂಡರ್ ಸಮುದಾಯದ ಸೆಂಗೊಟ್ಟೈಯನ್ ತಮಿಳಗ ವೆಟ್ರಿ ಕಳಗಂ ಸೇರ್ಪಡೆಯಾಗಿರುವುದರಿಂದ, ಚುನಾವಣೆಗೂ ಮುನ್ನ ಅದರ ಬಲ ಗಮನಾರ್ಹವಾಗಿ ಹೆಚ್ಚಳವಾಗಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ವಾಸ್ತವವಾಗಿ, ಭ್ರಷ್ಟಾಚಾರದ ಪ್ರಕರಣದಲ್ಲಿ ತಾನು ದೋಷಿ ಎಂದು ತೀರ್ಪು ಬಂದಾಗ, ಶಶಿಕಲಾ ಮುಖ್ಯಮಂತ್ರಿ ಹುದ್ದೆಯಿಂದ ಹಿಂದೆ ಸರಿದಿದ್ದರು. ಈ ವೇಳೆ ಪಕ್ಷದ ಹಿರಿಯ ನಾಯಕ ಕೆ.ಪಳನಿಸ್ವಾಮಿಯೊಂದಿಗೆ ಸೆಂಗೊಟ್ಟೈಯನ್ ಕೂಡಾ ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿ ಅಭ್ಯರ್ಥಿಯಾಗಿದ್ದರು. ಇಂತಹ ಸೆಂಗೊಟ್ಟೈಯನ್ ತಮಿಳಗ ವೆಟ್ರಿ ಕಳಗಂ ಪಕ್ಷ ಸೇರ್ಪಡೆಯಾಗಿರುವುದರಿಂದ, ಅದರ ಶಕ್ತಿ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.







