ಯೂಟ್ಯೂಬ್ ನಿಂದ ಮಾನಹಾನಿಕಾರಕ ವೀಡಿಯೊ ತೆಗೆದು ಹಾಕುವಲ್ಲಿ ವಿಫಲ: ಸುಂದರ್ ಪಿಚೈ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ
ಗೂಗಲ್ ಸಿಇಒ ಸುಂದರ್ ಪಿಚೈ | PC : X \ @sundarpichai
ಮುಂಬೈ: ಧ್ಯಾನ್ ಫೌಂಡೇಶನ್ ಮತ್ತು ಅದರ ಸಂಸ್ಥಾಪಕ ಯೋಗಿ ಅಶ್ವಿನಿ ಅವರ ಮಾನಹಾನಿಕಾರಕ ವೀಡಿಯೊ ತೆಗೆದುಹಾಕುವ ಕುರಿತ ಆದೇಶವನ್ನು ಯೂಟ್ಯೂಬ್ ಅನುಸರಿಸಲು ವಿಫಲವಾದ ಕಾರಣ ಮುಂಬೈ ನ್ಯಾಯಾಲಯವು ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
ಬಲ್ಲಾರ್ಡ್ ಪಿಯರ್ನಲ್ಲಿರುವ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈ ಕುರಿತು ನೋಟಿಸ್ ಜಾರಿ ಮಾಡಿದೆ. ಧ್ಯಾನ್ ಫೌಂಡೇಶನ್ ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯನ್ನು 2025ರ ಜ.3ಕ್ಕೆ ವಿಚಾರಣೆಗೆ ನಿಗದಿಪಡಿಸಲಾಗಿದೆ.
"ಪಖಂಡಿ ಬಾಬಾ ಕಿ ಕರ್ತುಟ್ (Pakhandi Baba ki Kartut)" ಶೀರ್ಷಿಕೆಯ ವೀಡಿಯೊವನ್ನು ಧ್ಯಾನ್ ಫೌಂಡೇಶನ್ ಆಧಾರ ರಹಿತ ಮತ್ತು ದುರುದ್ದೇಶಪೂರಿತ ಎಂದು ಆರೋಪಿಸಿದ ಬಳಿಕ ತೆಗೆದು ಹಾಕುವಂತೆ ಯೂಟ್ಯೂಬ್ಗೆ ಬಲ್ಲಾರ್ಡ್ ಪಿಯರ್ ನ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆದೇಶಿಸಿತ್ತು.
ಗೂಗಲ್ ಒಡೆತನದ ಯೂಟ್ಯೂಬ್ ಈ ಕುರಿತು ತಾಂತ್ರಿಕ ಆಕ್ಷೇಪಣೆಗಳನ್ನು ಸಲ್ಲಿಸಿದೆ. ಆಕ್ಷೇಪಣೆಗಳನ್ನು ತಿರಸ್ಕರಿಸಿದ ನ್ಯಾಯಾಲಯ ಅಂತಹ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಕ್ರಿಮಿನಲ್ ನ್ಯಾಯಾಲಯಗಳಿಗೆ ನಿರ್ಬಂಧವಿಲ್ಲ ಎಂದು ಸಮರ್ಥಿಸಿದೆ. ಇಂತಹ ವೀಡಿಯೊ ಸಾರ್ವಜನಿಕ ಶಾಂತಿಗೆ ಧಕ್ಕೆ ತರಬಹುದು ಎಂದು ನ್ಯಾಯಾಲಯವು ಎಚ್ಚರಿಸಿದೆ.
ಯೂಟ್ಯೂಬ್ ನ್ಯಾಯಾಲಯದ ಆದೇಶವನ್ನು ಪಾಲಿಸದ ಕಾರಣ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಧ್ಯಾನ್ ಫೌಂಡೇಶನ್ ಹೇಳಿದೆ. ಈ ಕುರಿತು ನವೆಂಬರ್ 2024ರಲ್ಲಿ ನೋಟಿಸ್ ನೀಡಲಾಗಿದೆ.