ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮಡಿದ 9 ಬ್ರಿಟಿಷ್ ಸಂತ್ರಸ್ತರ ಕುಟುಂಬಗಳಿಂದ ಏರ್ ಇಂಡಿಯಾ ವಿರುದ್ಧ ದಾವೆ

ಲಂಡನ್: ಕಳೆದ ವರ್ಷ ಜೂನ್ 12ರಂದು ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಒಂಬತ್ತು ಮಂದಿ ಬ್ರಿಟಿಷ್ ಸಂತ್ರಸ್ತರ ಕುಟುಂಬಗಳು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ವಿರುದ್ಧ ಲಂಡನ್ ಹೈಕೋರ್ಟ್ ನಲ್ಲಿ ದಾವೆ ಹೂಡಿವೆ.
ವೈಯಕ್ತಿಕ ಘಾಸಿ ಮತ್ತು ಹಾನಿಗಳಿಗೆ ಈ ಕುಟುಂಬಗಳು ಕಿಂಗ್ಸ್ ಬೆಂಚ್ ವಿಭಾಗದಲ್ಲಿ ತಮ್ಮ ಕಾನೂನು ಸಂಸ್ಥೆಗಳ ಮಲಕ ಜಂಟಿ ಕಾನೂನಾತ್ಮಕ ಕ್ಲೇಮ್ ಸಲ್ಲಿಸಿವೆ.
"ಏರ್ ಇಂಡಿಯಾ ವಿರುದ್ಧ ಹೈಕೋರ್ಟ್ ವಿಚಾರಣೆಯ ನೋಟಿಸ್ ಬಿಡುಗಡೆಯಾಗಿದ್ದರೂ, ಅಧಿಕೃತವಾಗಿ ಅದನ್ನು ವಿತರಿಸಿಲ್ಲ. ಲಂಡನ್ ನಲ್ಲಿ ರಹಸ್ಯ ಸಂಧಾನ ಮಾತುಕತೆಗಳು ನಡೆಯುವ ಹಿನ್ನೆಲೆಯಲ್ಲಿ ಇನ್ನೂ ಅಧಿಕೃತವಾಗಿ ನೋಟಿಸ್ ನೀಡಿಲ್ಲ. ಬಹುಶಃ ಸಂತ್ರಸ್ತರು ವಿಚಾರಣೆ ಇಲ್ಲದೇ ಪರಸ್ಪರ ಸಂಧಾನ ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳುವ ನಿರೀಕ್ಷೆ ಇದೆ" ಎಂದು ಕೀಸ್ಟೋನ್ ಲಾ ವಿಮಾನಯಾನ ಪಾಲುದಾರರಾಗಿರುವ ನೇಂಸ್ ಹೀಲಿಪ್ರಾಟ್ ಹೇಳಿದ್ದಾರೆ.
ದಾವೆ ಬಗ್ಗೆ ಪ್ರತಿಕ್ರಿಯಿಸಲು ಏರ್ ಇಂಡಿಯಾ ನಿರಾಕರಿಸಿದೆ. ಏರ್ ಇಂಡಿಯಾಗೆ ಸೇರಿದ ಬೋಯಿಂಗ್ 787 ವಿಮಾನ ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೇ ಅಹ್ಮದಾಬಾದ್ ನಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 242 ಮಂದಿಯ ಪೈಕಿ 241 ಮಂದಿ ಮೃತಪಟ್ಟಿದ್ದರು. ಇವರಲ್ಲಿ ಒಂಬತ್ತು ಮಂದಿ ಬ್ರಿಟಿಷ್ ಪ್ರಜೆಗಳು ಸೇರಿದ್ದರು.





