ಕುಟುಂಬ ಯೋಜನೆ ಎಫೆಕ್ಟ್: ತಮಿಳುನಾಡಿನಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಇಳಿಕೆ ಸಾಧ್ಯತೆ; ಸ್ಟಾಲಿನ್ ಕಳವಳ!

ಎಂ.ಕೆ.ಸ್ಟಾಲಿನ್ | PC : PTI
ಚೆನ್ನೈ: ತಮಿಳುನಾಡು ಪರಿಣಾಮಕಾರಿಯಾಗಿ ಕುಟುಂಬ ಯೋಜನೆ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದರಿಂದಾಗಿ ಅದು ಲೋಕಸಭಾ ಸ್ಥಾನಗಳ ಸಂಖ್ಯೆಯಲ್ಲಿ ಇಳಿಕೆಯಾಗುವಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆಯೆಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ರವಿವಾರ ಹೇಳಿದ್ದಾರೆ.
ಸ್ವಕ್ಷೇತ್ರವಾದ ಕೊಲತ್ತೂರಿನಲ್ಲಿ ಡಿಎಂಕೆಯ ಹಿರಿಯ ಪದಾಧಿಕಾರಿಯೊಬ್ಬರ ಕುಟುಂಬದ ವಿವಾಹದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ನವದಂಪತಿಗಳು ಅವರ ಮಕ್ಕಳಿಗೆ ತಮಿಳು ಹೆಸರುಗಳನ್ನು ಇಡುವಂತೆಯೂ ಅವರು ಕರೆ ನೀಡಿದರು.
ತಮಿಳುನಾಡು ಕುಟುಂಬ ಯೋಜನೆಯ ಕಾರ್ಯಕ್ರಮವನ್ನು ನಿರಂತರವಾಗಿ ಅನುಸರಿಸಿಕೊಂಡು ಬಂದಿದ್ದರಿಂದ ಅದು ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯೊಂದಿಗೆ ಸಂಸದೀಯ ಸ್ಥಾನಗಳ ಇಳಿಕೆಯ ಸನ್ನಿವೇಶವನ್ನು ಎದುರಿಸುತ್ತಿದೆ ಎಂದವರು ಹೇಳಿದರು.
ತಮಿಳುನಾಡು, 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಆದರೆ ಮತದಾರರ ಸಂಖ್ಯೆಯ ಇಳಿಕೆಯಿಂದಾಗಿ ಕ್ಷೇತ್ರ ಪುನರ್ವಿಂಗಡಣೆಯ ಪ್ರಕ್ರಿಯೆ ಮೂಲಕ ಲೋಕಸಭಾ ಸ್ಥಾನಗಳನ್ನು ಕಡಿಮೆಗೊಳಿಸುವುದನ್ನು ವಿರೋಧಿಸುತ್ತಾ ಬಂದಿದೆ.
ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯ ಪ್ರಕ್ರಿಯೆಯು, ಜನರು 16 ಮಕ್ಕಳಿಗೆ ಜನ್ಮ ನೀಡಲು ಯೋಚಿಸುವಂತೆ ಮಾಡಿದೆ ಎಂದು ಸ್ಟಾಲಿನ್ ಈ ಹಿಂದೆ ಹೇಳಿದ್ದರು. 16 ವಿಧದ ಸಂಪತ್ತಿನಲ್ಲಿ ಮಕ್ಕಳೂ ಕೂಡಾ ಒಂದೆಂದು ಅವರು ಪುರಾತನ ತಮಿಳು ನಾಣ್ಣುಡಿಯನ್ನು ಉಲ್ಲೇಖಿಸಿದ್ದರು.







