ಹಜ್ ಯಾತ್ರೆಗೆ ಸೌದಿ ರಾಜರಿಂದ ಆಹ್ವಾನಿತರಿಗೆ ದಿಲ್ಲಿಯ ಸೌದಿ ರಾಯಭಾರ ಕಚೇರಿಯಲ್ಲಿ ಬೀಳ್ಕೊಡುಗೆ
ಪಾಣಕ್ಕಾಡ್ ಸಾದಿಕ್ ಅಲಿ ಶಿಹಾಬ್ ತಂಙಳ್ ಸಹಿತ ಮೂವತ್ತು ಮಂದಿಯ ನಿಯೋಗ

ಮಂಗಳೂರು: ಪವಿತ್ರ ಮಕ್ಕಾ ಹಾಗು ಮದೀನಾ ಮಸೀದಿಗಳ ಪಾಲಕರಾದ ಸೌದಿ ಅರೇಬಿಯಾದ ರಾಜರ ಅತಿಥಿಯಾಗಿ ಪವಿತ್ರ ಹಜ್ ಯಾತ್ರೆ ಮಾಡಲು ಈ ವರ್ಷ ಭಾರತದಿಂದ ಆಯ್ಕೆಯಾದವರಿಗೆ ದಿಲ್ಲಿಯ ಸೌದಿ ರಾಯಭಾರ ಕಚೇರಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ಸೌದಿ ರಾಯಭಾರ ಕಚೇರಿಯಲ್ಲಿ ಇಸ್ಲಾಮಿಕ್ ವ್ಯವಹಾರಗಳ ಮುಖ್ಯಸ್ಥ ಬದರ್ ನಾಸಿರ್ ಅಲನಝೀ ಅವರು ಭಾರತದಿಂದ ಸೌದಿ ರಾಜರ ಅತಿಥಿಗಳಾಗಿ ಹಜ್ ಗೆ ಹೋಗುವವರನ್ನು ಭೇಟಿಯಾಗಿ ಶುಭ ಹಾರೈಸಿದರು. ಈ ನಿಯೋಗದಲ್ಲಿರುವ ಕೇರಳದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ ಅಧ್ಯಕ್ಷ ಪಾಣಕ್ಕಾಡ್ ಸಾದಿಕ್ ಅಲಿ ಶಿಹಾಬ್ ತಂಙಳ್ ಅವರೂ ಈ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ನಿಯೋಗದಲ್ಲಿ ಆಯ್ಕೆಯಾಗಿದ್ದ ಮಂಗಳೂರಿನ ಪಾಂಡೇಶ್ವರ ನಿವಾಸಿ ಸಫ್ವಾನ್ ಜುನೈದ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
(ಬದರ್ ನಾಸಿರ್ ಅಲನಝೀ ಜೊತೆ ಪಾಣಕ್ಕಾಡ್ ಸಾದಿಕ್ ಅಲಿ ಶಿಹಾಬ್ ತಂಙಳ್ ಮತ್ತು ಸಫ್ವಾನ್ ಜುನೈದ್)
ಸೌದಿ ರಾಯಭಾರ ಕಚೇರಿಯು ಹಜ್‌ಯಾತ್ರೆಗಾಗಿ ಜಗತ್ತಿನ ವಿವಿಧ ದೇಶಗಳಿಂದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತದೆ. ಇದನ್ನು ಸೌದಿ ಅರೇಬಿಯಾದ ಧಾರ್ಮಿಕ ವ್ಯವಹಾರಗಳ ಸಚಿವಾಲಯ ಸಂಯೋಜಿಸುತ್ತದೆ. ಈ ಎಲ್ಲಾ ಅತಿಥಿಗಳ ಹಜ್ ಪ್ರಯಾಣದ ವೆಚ್ಚವನ್ನು ಸೌದಿ ಅರೇಬಿಯಾದ ರಾಜ ಭರಿಸುತ್ತಾರೆ. ಈ ಹಾಜಿಗಳಿಗೆ ಅಲ್ಲಿನ ಪ್ರಮುಖ ನಾಯಕರನ್ನು ಭೇಟಿ ಮಾಡುವ ಅವಕಾಶವಿರುತ್ತದೆ. ಮಂಗಳೂರಿನ ಸಫ್ವಾನ್ ಜುನೈದ್‌ರ ಸಾಮಾಜಿಕ, ಧಾರ್ಮಿಕ ಚಟುವಟಿಕೆಯನ್ನು ಪರಿಗಣಿಸಿ ಈ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಹಜ್ ಯಾತ್ರೆಗೈಯಲು ಸೌದಿ ಅರೇಬಿಯಾದ ರಾಜನ ಅತಿಥಿಗಳಾಗಿ ವಿಶ್ವದ ವಿವಿಧೆಡೆಗಳಿಂದ 1300ಕ್ಕೂ ಅಧಿಕ ಮಂದಿ ಹಜ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರಲ್ಲಿ ಈ ಬಾರಿ ಭಾರತದಿಂದ 30 ಮಂದಿಗೆ ಅವಕಾಶ ಲಭಿಸಿದೆ. ಈ ಪೈಕಿ ಮಂಗಳೂರಿನ ಸಫ್ವಾನ್ ಜುನೈದ್ ಕೂಡ ಒಬ್ಬರಾಗಿದ್ದಾರೆ. ಮೇ 28ರಂದು ಈ ನಿಯೋಗ ಹೊಸದಿಲ್ಲಿಯಿಂದ ಜಿದ್ದಾಗೆ ಪ್ರಯಾಣಿಸುವ ಮೂಲಕ ಹಜ್ ಯಾತ್ರೆ ಪ್ರಾರಂಭಿಸಲಿದೆ.







