ಫರಿದಾಬಾದ್ | ಎಸಿ ಕಂಪ್ರೆಸರ್ ಸ್ಫೋಟ, ಕುಟುಂಬದ ಮೂವರು ಮೃತ್ಯು

PC : X
ಫರೀದಾಬಾದ್(ಹರ್ಯಾಣ),ಸೆ.8: ಕಟ್ಟಡದಲ್ಲಿಯ ಏರ್ ಕಂಡಿಷನರ್ ನ ಕಂಪ್ರೆಸರ್ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಮೂವರು ಸದಸ್ಯರು ಮತ್ತು ಅವರ ಸಾಕುನಾಯಿ ಮೃತಪಟ್ಟಿರುವ ಘಟನೆ ಹರ್ಯಾಣದ ಫರೀದಾಬಾದ್ ನಲ್ಲಿ ಸಂಭವಿಸಿದೆ.
ಮೃತರನ್ನು ಸಚಿನ್ ಕಪೂರ್,ಅವರ ಪತ್ನಿ ರಿಂಕು ಕಪೂರ್ ಮತ್ತು ಪುತ್ರಿ ಸುಜನ್ ಕಪೂರ್ ಎಂದು ಗುರುತಿಸಲಾಗಿದೆ.
ಸೋಮವಾರ ನಸುಕಿನ 1:30ರ ಸುಮಾರಿಗೆ ನಾಲ್ಕಂತಸ್ತಿನ ಕಟ್ಟಡದ ಮೊದಲ ಅಂತಸ್ತಿನಲ್ಲಿ ಸ್ಫೋಟ ಸಂಭವಿಸಿದ್ದು, ದಟ್ಟವಾದ ಹೊಗೆ ಕಪೂರ್ ಕುಟುಂಬ ನಿದ್ರಿಸಿದ್ದ ಎರಡನೇ ಅಂತಸ್ತಿಗೆ ವ್ಯಾಪಿಸಿತ್ತು. ಘಟನೆಯ ಸಂದರ್ಭದಲ್ಲಿ ಮೊದಲ ಅಂತಸ್ತಿನಲ್ಲಿಯ ಮನೆ ಖಾಲಿಯಿತ್ತೆನ್ನಲಾಗಿದೆ.
ಸಚಿನ್ ಕಪೂರ್,ಪತ್ನಿ ಮತ್ತು ಪುತ್ರಿ ಉಸಿರುಗಟ್ಟಿ ಸಾವನ್ನಪ್ಪಿದ್ದರೆ, ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಅವರ ಪುತ್ರ ತನ್ನನ್ನು ರಕ್ಷಿಸಿಕೊಳ್ಳಲು ಕಿಟಕಿಯಿಂದ ಹೊರಕ್ಕೆ ಹಾರಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಟ್ಟಡದ ನಾಲ್ಕನೇ ಅಂತಸ್ತಿನಲ್ಲಿ ಏಳು ಜನರ ಕುಟುಂಬವು ವಾಸವಿದ್ದು, ಮೂರನೇ ಅಂತಸ್ತನ್ನು ಕಪೂರ್ ತನ್ನ ಕಚೇರಿಯನ್ನಾಗಿ ಬಳಸುತ್ತಿದ್ದರು.
ಸ್ಫೋಟದ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ನೆರೆಕರೆಯವರು ಕಟ್ಟಡದಲ್ಲಿದ್ದ ಇತರರನ್ನು ರಕ್ಷಿಸಿದ್ದಾರೆ.







