ರೈತರ ಪ್ರತಿಭಟನೆ: ದಿಲ್ಲಿ ಚಲೋ ಆಂದೋಲನದೊಂದಿಗೆ ಕೈಜೋಡಿಸಲು ಸಂಯುಕ್ತ ಕಿಸಾನ್ ಮೋರ್ಚಾ ಸಜ್ಜು

Photo: PTI
ಚಂಡಿಗಡ: 2020-21ರಲ್ಲಿ ಈಗ ರದ್ದುಗೊಂಡಿರುವ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರ ಸುದೀರ್ಘ ಪ್ರತಿಭಟನೆಯನ್ನು ಮುನ್ನಡೆಸಿದ್ದ ಮತ್ತು ಹಾಲಿ ನಡೆಯುತ್ತಿರುವ ‘ದಿಲ್ಲಿ ಚಲೋ’ ಜಾಥಾದಿಂದ ದೂರವುಳಿದಿದ್ದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಈಗ ಆಂದೋಲನದಲ್ಲಿ ಧುಮುಕಲು ಸಜ್ಜಾಗಿದೆ. ಶುಕ್ರವಾರದಿಂದ ಪುನರಾರಂಭಗೊಳ್ಳಲಿರುವ ಆಂದೋಲನದಲ್ಲಿ ಅದು ಪಾಲ್ಗೊಳ್ಳಲಿದೆ.
ಗುರುವಾರ ಚಂಡಿಗಡದಲ್ಲಿ ಎಸ್ಕೆಎಮ್ನ ರಾಷ್ಟ್ರೀಯ ಸಮನ್ವಯ ಸಮಿತಿ ಮತ್ತು ಸಾಮಾನ್ಯ ಮಂಡಳಿ ನಡುವೆ ಸಭೆ ನಡೆಯಿತು. ಶುಕ್ರವಾರ ‘ಕರಾಳ ದಿನ’ ಅಥವಾ ‘ಆಕ್ರೋಶ ದಿವಸ್’ ಅನ್ನು ಆಚರಿಸುವುದಾಗಿ ಎಸ್ಕೆಎಂ ಪ್ರಕಟಿಸಿದೆ.
‘ನಾಳೆಯಿಂದ ನಾವು ದೇಶಾದ್ಯಂತ ಬೃಹತ್ ಕಾರ್ಯಕ್ರಮಗಳನ್ನು ಆರಂಭಿಸಲಿದ್ದೇವೆ. ಮೊದಲ ಕಾರ್ಯಕ್ರಮವಾಗಿ ಫೆ.23ರಂದು ಆಕ್ರೋಶ ದಿವಸ್ ಆಚರಿಸಲಾಗುವುದು. ಫೆ.26ರಂದು ದೇಶಾದ್ಯಂತ ರೈತರು ತಮ್ಮ ಟ್ರ್ಯಾಕ್ಟರ್ ಗಳೊಂದಿಗೆ ಮತಪ್ರದರ್ಶನ ನಡೆಸಲಿದ್ದು, ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯುಟಿಒ)ಯಿಂದ ಹೊರಬರುವಂತೆ ನಾವು ಸರಕಾರವನ್ನು ಆಗ್ರಹಿಸಲಿದ್ದೇವೆ. ಮಾ.14ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಅಖಿಲ ಭಾರತ ಕಿಸಾನ್ ಮಜ್ದೂರ್ ಮಹಾ ಪಂಚಾಯತ್ ನಡೆಯಲಿದೆ. ಒಂದು ಲಕ್ಷಕ್ಕೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆಯಿದೆ’ ಎಂದು ರೈತ ನಾಯಕ ಅವಿಕ್ ಸಹಾ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
2020-21ರಲ್ಲಿ ಕೇಂದ್ರವು ಈಗ ರದ್ದುಗೊಳಿಸಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಎಸ್ಕೆಎಂ ಮುನ್ನಡೆಸಿತ್ತು. ಆದರೆ ಎಸ್ಕೆಎಂ (ರಾಜಕೀಯೇತರ) ಮತ್ತು ಕಿಸಾನ ಮಜ್ದೂರ್ ಮೋರ್ಚಾದ ನೇತೃತ್ವದಲ್ಲಿ ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿರಲಿಲ್ಲ.
ಯುವರೈತನ ಸಾವು ಕುರಿತು ಕೊಲೆ ಪ್ರಕರಣ ದಾಖಲಿಸಲು ಆಗ್ರಹ:
ಬುಧವಾರ ಖನೌರಿ ಗಡಿಯಲ್ಲಿ ಹರ್ಯಾಣ ಪೋಲಿಸರ ಬುಲೆಟ್ ಗುಂಡಿನಿಂದ ಪಂಜಾಬಿನ ಬಠಿಂಡಾ ಜಿಲ್ಲೆಯ 21ರ ಹರೆಯದ ರೈತ ಶುಭಕರಣ ಸಿಂಗ್ ಸಾವಿಗೆ ಸಂಬಂಧಿಸಿದಂತೆ ಕೊಲೆ ಪ್ರಕರಣವನ್ನು ದಾಖಲಿಸುವಂತೆ ಎಸ್ಕೆಎಂ ಆಗ್ರಹಿಸಿದೆ. ಮೃತ ರೈತನ ಕುಟುಂಬಕ್ಕೆ ಒಂದು ಲಕ್ಷ ರೂ.ಗಳ ಪರಿಹಾರವನ್ನು ಪಾವತಿಸುವಂತೆಯೂ ಅದು ಆಗ್ರಹಿಸಿದೆ.
‘ಬುಧವಾರ ಖನೌರಿ ಗಡಿಯಲ್ಲಿ ಘರ್ಷಣೆಗೆ ಹೊಣೆಗಾರರ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ವಿಚಾರಣೆಗೂ ನಾವು ಆಗ್ರಹಿಸಿದ್ದೇವೆ’ ಎಂದು ಸಂಯುಕ್ತ ಸಮಾಜ ಮೋರ್ಚಾ ಪಾರ್ಟಿ ಮುಖ್ಯಸ್ಥ ಬಲಬೀರ್ ಸಿಂಗ್ ರಾಜೆವಾಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.







