ವೈದ್ಯಕೀಯ ನಿರ್ಲಕ್ಷ್ಯ ಆರೋಪ : ಜಿಲ್ಲಾಧಿಕಾರಿ ಕಚೇರಿಗೆ ನವಜಾತ ಶಿಶುವಿನ ಮೃತದೇಹ ಚೀಲದಲ್ಲಿ ಕೊಂಡೊಯ್ದ ತಂದೆ

Photo | x
ಲಕ್ನೋ : ಉತ್ತರ ಪ್ರದೇಶದ ಲಖಿಂಪುರ ಖೇರಿಯ ಆಸ್ಪತ್ರೆಯೊಂದರಲ್ಲಿ ಹಣ ಪಾವತಿಸದ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿದ್ದರಿಂದ ನವಜಾತ ಶಿಶು ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಜಿಲ್ಲಾಡಳಿತ ಆಸ್ಪತ್ರೆಗೆ ಬೀಗ ಜಡಿದಿದೆ.
ಮಹೇವಾಗಂಜ್ನ ಗೋಲ್ಡರ್ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಶಿಶು ಮೃತಪಟ್ಟಿದೆ ಎಂದು ದುಃಖಿತ ತಂದೆ ನೌಸರ್ ಜೋಗಿ ಗ್ರಾಮದ ನಿವಾಸಿ ಬಿಪಿನ್ ಗುಪ್ತಾ ಆರೋಪಿಸಿದ್ದಾರೆ. ಆಸ್ಪತ್ರೆಯ ಆಡಳಿತ ಮಂಡಳಿ ನನ್ನ ಬಳಿ ಹಣವಿಲ್ಲದ ಕಾರಣ ಚಿಕಿತ್ಸೆ ನೀಡಲು ನಿರಾಕರಿಸಿದೆ. ಪತ್ನಿ ರೂಬಿ ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ಹೇಳಿದ್ದಾರೆ.
ಶಿಶುವಿನ ಮೃತದೇಹವನ್ನು ಚೀಲದಲ್ಲಿ ಹೊತ್ತುಕೊಂಡು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗೆ ತಂದ ಬಿಪಿನ್ ಗುಪ್ತಾ, "ನನ್ನ ಶಿಶುವನ್ನು ಬದುಕಿಸಿ ಅಥವಾ ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ" ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಲಖಿಂಪುರ ಖೇರಿಯ ಮುಖ್ಯ ವೈದ್ಯಾಧಿಕಾರಿ ಡಾ.ಸಂತೋಷ್ ಗುಪ್ತಾ, ಈ ಬಗ್ಗೆ ತನಿಖೆಯನ್ನು ನಡೆಸಲಾಗುವುದು, ಆಸ್ಪತ್ರೆಯ ನಿರ್ಲಕ್ಷ್ಯ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದರ ಬೆನ್ನಲ್ಲೇ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಕೂಡ ಪ್ರತಿಕ್ರಿಯಿಸಿದ್ದು, ಗೋಲ್ಡರ್ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ ಮತ್ತು ಎಲ್ಲಾ ರೋಗಿಗಳನ್ನು ಆರೈಕೆಗಾಗಿ ಜಿಲ್ಲಾ ಮಹಿಳಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ.







